ಕಾರ್ಕಳ: ಕಲ್ಲು ಕಟ್ಟಿಂಗ್ ಮಾಡುವ ಕಾರ್ಖಾನೆಗಳಲ್ಲಿ ಉಪಯೋಗವಾಗದೆ ಇರುವ ದೊಡ್ಡ ದೊಡ್ಡ ಕಲ್ಲುಗಳನ್ನು ಸಾರ್ವಜನಿಕ ರಸ್ತೆಗೆ ಸುರಿದಿರುವುದರಿಂದ ರಸ್ತೆ ಹಾಳಾಗಿ ವಾಹನ ಸಂಚರಾಕ್ಕೆ ಅಸಾಧ್ಯವಾದ ಘಟನೆ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕಿನ್ಯರಕಟ್ಟ ಭಾಗದಲ್ಲಿ ನಡೆದಿದೆ.
ಉಡುಪಿ – ಕಾರ್ಕಳ ಮುಖ್ಯ ರಸ್ತೆಯ ಕುಕ್ಕುಂದೂರು ಕೋಂಕೆ ಮನೆಯಿಂದ ಮೂಡುಕಿನ್ಯರಕಟ್ಟ ಮಾರ್ಗವಾಗಿ ಪೊಸನೊಟ್ಟು ಮೂಲಕ ಆನಂದಿ ಮೈದನಾದ ಬಳಿ ಕಾರ್ಕಳ – ನಕ್ರೆ ಮುಖ್ಯ ರಸ್ತೆ ಸಂಪರ್ಕ ರಸ್ತೆಯ ಮೂಡುಕಿನ್ಯರಕಟ್ಟ ಭಾಗದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಈ ರಸ್ತೆಯನ್ನು ಸಂಪರ್ಕ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗಿತ್ತು. ನಕ್ರೆ, ಪೊಸನೊಟ್ಟು ಸೇರಿದಂತೆ ಇತರ ಭಾಗದ ಜನತೆಗೆ ಈ ರಸ್ತೆಯಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಿತ್ತು. ನಂತರ ಈ ರಸ್ತೆಯಲ್ಲಿ 40 ಟನ್‌ಗ್ ಅಧಿಕ ತೂಕದ ಕಲ್ಲಿನ ಘನ ವಾಹನಗಳು ಸಂಚರಿಸಲು ಆರಂಭವಾಗಿ ರಸ್ತೆ ಹಾಳಾಗಿರುತ್ತದೆ. ಅಲ್ಲದೆ ಈ ಬಾರಿ ಮಳೆ ಆರಂಭವಾದಗ ಘನ ವಾಹನಗಳ ಭಾರಕ್ಕೆ ರಸ್ತೆ ಅಲ್ಲಲ್ಲಿ ಜಗ್ಗಿ ಹೊಂಡಗಳು ಬಿದ್ದು ಸಣ್ಣ ವಾಹನಗಳ ಸಂಚಾರಕ್ಕೆ, ನಡೆದುಕೊಂಡು ಹೋಗುವವರಿಗೆ ಅಸಾಧ್ಯವಾಗಿತ್ತು. ನಂತರ ಈ ರಸ್ತೆಗಳಿಗೆ ಕಲ್ಲು ಕಟ್ಟಿಂಗ್ ಪ್ಯಾಕ್ಟರಿಯಿಂದ ಕಟ್ಟಿಂಗ್ ಮಾಡಿ ಉಪಯೋಗವಾಗದೆ ಉಳಿದಿರುವ ದೊಡ್ಡ ದೊಡ್ಡ ಕಲ್ಲುಗಳನ್ನು (ತ್ಯಾಜ್ಯ) ರಸ್ತೆಗೆ ಸುರಿದಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ನೂರಾರು ಬೈಕ್, ರಿಕ್ಷಾ, ಕಾರುಗಳು ಸಂಚಾರಕ್ಕೆ ಅಸಾಧ್ಯವಾಗಿರುತ್ತದೆ. ಕುಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆಲವು ಕಲ್ಲು ಕಟ್ಟಿಂಗ್ ಪ್ಯಾಕ್ಟರಿಗಳಿಂದ ಸಾಮಾನ್ಯ ಜನರಿಗೆ ಸಮಸ್ಯೆಯುಂಟಾಗುತ್ತಿದ್ದರು ಕುಕ್ಕುಂದೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

