ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಉದ್ಘಾಟನೆ

0
27

ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರದ ವತಿಯಿಂದ ಉದ್ಯಮಶೀಲತಾ ಅಭಿವೃದ್ಧಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಪ್ರೇಮಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ತರಬೇತಿಯ ಮಹತ್ವ ಹಾಗೂ ಮಹಿಳೆಯರ ಜೀವನದಲ್ಲಿ ತರಬೇತಿಯ ಅಗತ್ಯತೆಯನ್ನು ಸವಿವರವಾಗಿ ವಿವರಿಸಿದರು. ಸ್ವಾವಲಂಬಿ ಜೀವನ ನಡೆಸಲು ತರಬೇತಿಯು ಭದ್ರವಾದ ಅಡಿಪಾಯವಾಗಿದೆ ಎಂದು ತಿಳಿಸಿದರು. ಮಹಿಳಾ ನಿವಾಸಿನಿಯರು ತರಬೇತಿಯನ್ನು ಹೆಚ್ಚಿನ ಆಸಕ್ತಿ ಮತ್ತು ಶ್ರದ್ಧೆಯಿಂದ ಕಲಿತು, ತಮ್ಮಲ್ಲಿರುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಜೊತೆಗೆ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಸ್ವಾವಲಂಬಿಗಳಾಗಿ ಬದುಕುವಂತೆ ಕರೆ ನೀಡಿದರು.

ಹಾಗೂ ಇನ್ನೋರ್ವ ಅತಿಥಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ. ವಿಜಯಲಕ್ಷ್ಮಿ ಹೇರೂರ ಮಾತನಾಡಿ, ಮಹಿಳೆಯರಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಕೌಶಲ್ಯಾಧಾರಿತ ತರಬೇತಿಯು ಅವಶ್ಯಕ. ಹಾಗಾಗಿ ಅಂತಹ ತರಬೇತಿಯನ್ನು ಉತ್ತಮವಾಗಿ ಉತ್ಸಾಹದಿಂದ ಕಲಿತು, ಸ್ವಾವಲಂಬಿಯಾಗಿ ಎಂದು ತರಬೇತಿಯ ಯಶಸ್ಸಿಗೆ ಶುಭ ಹಾರೈಸಿದರು.

ರಾಜ್ಯ ಮಹಿಳಾ ನಿಲಯದ ಅಧೀಕ್ಷಕರಾದ ಶ್ರೀಮತಿ ಪುಷ್ಪರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುಡ್ ಸೆಟ್ ಸಂಸ್ಥೆ ಸಂಸ್ಥೆ, ಬ್ರಹ್ಮಾವರದ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಅವರು ತರಬೇತಿಯ ಸದುಪಯೋಗ ಪಡೆದುಕೊಂಡು ಭವಿಷ್ಯದಲ್ಲಿ ಯಶಸ್ವಿಯಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಮಹಿಳಾ ನಿಲಯದ ಸಿಬ್ಬಂದಿ ಪ್ರೀತಿ ನಿರೂಪಿಸಿದರು. ಸಂಸ್ಥೆಯ ಕಚೇರಿ ಸಹಾಯಕರಾದ ಶಾಂತಪ್ಪ ವಂದಿಸಿದರು. ಸಂಸ್ಥೆಯ ಬೋಧಕ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.