ಬ್ರಹ್ಮಾವರ: ಬಾಕೂರು ಹನೆಹಳ್ಳಿ ಶ್ರೀ ಕೋಟಿ ಚೆನ್ನಯ ಸೈನಿಕ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ಅಧ್ಯಕ್ಷ ಅಣ್ಣಯ್ಯ ದಾಸ್ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಯಂಟ್ಸ್ ಫೆಡರೇಶನ್ ಪೂರ್ವ ಅಧ್ಯಕ್ಷ ಮಧುಸೂದನ್ ಹೇರೂರು, ಸೈನಿಕರ ತ್ಯಾಗ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ವಿಶ್ವದ ಹಲವು ದೇಶಗಳಲ್ಲಿ ಇಂದಿಗೂ ಜನರಿಗೆ ಸಂಪೂರ್ಣ ಸ್ವಾತಂತ್ರ್ಯವಿಲ್ಲ. ಆದರೆ ಭಾರತದಲ್ಲಿ ಪ್ರಜೆಗಳಿಗೆ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ತಿಳಿಸಲಾಗಿದೆ. ಆದ್ದರಿಂದ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಆಚರಿಸಬೇಕು ಎಂದರು.
ಜಯಂಟ್ಸ್ ಸದಸ್ಯ ಹಾಗೂ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ವರ್ಷಕ್ಕೊಮ್ಮೆ ಮಾತ್ರ ಸ್ವಾತಂತ್ರ್ಯವನ್ನು ನೆನಪಿಸಿಕೊಂಡರೆ ಸಾಲದು. ದೇಶಕ್ಕಾಗಿ ಹೋರಾಡಿದ ಮಹನೀಯರಿಗೆ ಪ್ರತಿದಿನವೂ ಕೃತಜ್ಞತೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯೋತ್ಸವವು ಪ್ರತಿಯೊಬ್ಬರ ಮನೆಯ ಹಬ್ಬವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಯಂಟ್ಸ್ ಯೂನಿಟ್ ಡೈರೆಕ್ಟರ್ ಸುಂದರ ಪೂಜಾರಿ ಮುಡುಕುಕ್ಕುಡೆ, ಕಾರ್ಯದರ್ಶಿ ಮಿಲ್ಟನ್ ಒಲಿವೇರ, ಬಾಕೂರು ಗಣೇಶ್ ಮಾಸ್ತಿ ನಗರ, ಸೈನಿಕ ಶಾಲೆಯ ಮುಖ್ಯ ತರಬೇತುದಾರ ಸುಬೇದಾರ್ ಜನಾರ್ಧನ್, ಲ್ಯಾನ್ಸ್ ನಾಯಕ್ ಕೃಷ್ಣಪ್ಪ, ಹವಲ್ದಾರ್ ರಾಜೀವ್ ಹಾಗೂ ಸೈನಿಕ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೈನಿಕ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರದ ಬಗ್ಗೆ ಜವಾಬ್ದಾರಿಯ ಭಾವನೆ ಮೂಡಿಸುವ ರೀತಿಯಲ್ಲಿ ನಡೆಯಿತು.
ಜಯಂಟ್ಸ್ ಪೂರ್ವ ಅಧ್ಯಕ್ಷ ವಿವೇಕಾನಂದ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

