ಪಾಕಿಸ್ತಾನ ದಾಳಿಯಿಂದ ಹಾನಿಗೊಳಗಾದ ಮಸೀದಿ ಸರಿಪಡಿಸಲು ಭಾರತೀಯ ಸೇನೆಯ ಸಹಾಯ

0
406

ಶ್ರೀನಗರ:ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಸೀದಿಯೊಂದಕ್ಕೆ ಹಾನಿಯುಂಟಾಗಿದ್ದು, ಅದನ್ನು ಸರಿಪಡಿಸಲು ಭಾರತೀಯ ಸೇನೆಯು ಸಹಾಯ ಮಾಡಿದೆ. ಏಪ್ರಿಲ್ 22ರಂದು ಜಮ್ಮ ಮತ್ತು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ತಕ್ಕ ಪಾಠ ಕಲಿಸಿತ್ತು. 9 ಕಡೆ ಉಗ್ರರ ನೆಲೆಗಳನ್ನು ನಾಶಪಡಿಸಿತ್ತು.

ಜಮ್ಮು ಮತ್ತು ಕಾಶ್ಮೀರದ ಇಬ್ಕೋಟ್ ಗ್ರಾಮದ ಛೋಟಗಾಂವ್ ಪ್ರದೇಶದಲ್ಲಿರುವ ಮಸೀದಿಯೊಂದು ಪಾಕಿಸ್ತಾನದ ಗುಂಡಿನ ದಾಳಿಯಿಂದ ಹಾನಿಗೊಳಗಾಗಿದ್ದು, ಭಾರತೀಯ ಸೇನೆಯು ಅದನ್ನು ದುರಸ್ತಿ ಮಾಡಲು ಸಹಾಯ ಮಾಡಿದೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಘರ್ಷಣೆಯಲ್ಲಿ ಮಸೀದಿಗೆ ಹಾನಿಯಾಗಿತ್ತು.

ಗಡಿಯಾಚೆಯಿಂದ ಶೆಲ್ ದಾಳಿ ನಡೆದಾಗ ಮಸೀದಿಯ ಮೇಲ್ಛಾವಣಿ ಹಾನಿಗೊಳಗಾಯಿತು ಮತ್ತು ಸೌರ ಫಲಕ ವ್ಯವಸ್ಥೆಗಳು ಸಹ ನಾಶವಾದವು. ಈ ಅವಧಿಯಲ್ಲಿ ನಮಾಜ್ ಮಾಡುವ ಸ್ಥಳದಲ್ಲಿದ್ದ ಮ್ಯಾಟ್​ಗಳು ಕೂಡ ಸುಟ್ಟು ಹೋಗಿದ್ದವು. ಮಸೀದಿಗೆ ಆದ ಹಾನಿಯಿಂದ ಸ್ಥಳೀಯ ಸಮುದಾಯವು ಅಸಮಾಧಾನಗೊಂಡಿತ್ತು.

ನಮಾಜ್ ಮಾಡುವಲ್ಲಿ ಮತ್ತು ಧಾರ್ಮಿಕ ಸಭೆಗಳಿಗೆ ಹಾಜರಾಗುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರು. ಇದನ್ನು ನೋಡಿದ ಭಾರತೀಯ ಸೇನೆ ಸಹಾಯ ಮಾಡಲು ಮುಂದೆ ಬಂದಿತ್ತು. ಸೇನೆಯು ಛಾವಣಿಯನ್ನು ದುರಸ್ತಿ ಮಾಡಿಸಿ, ಸೌರಶಕ್ತಿ ಫಲಕಗಳನ್ನು ಪುನಃ ಅಳವಡಿಸಿ, ದಾಳಿಯಲ್ಲಿ ನಾಶವಾದ ಮ್ಯಾಟ್‌ಗಳನ್ನು ಹೊಸದರೊಂದಿಗೆ ಬದಲಾಯಿಸಿತು.

ಈಗ ಮಸೀದಿ ಮೊದಲಿನಂತೆಯೇ ಸಿದ್ಧವಾಗಿದೆ. ಈ ನೆರವು ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಮಾನವೀಯ ನೆರವು ನೀಡಲು ಭಾರತೀಯ ಸೇನೆಯ ಪ್ರಯತ್ನಗಳ ಭಾಗವಾಗಿದೆ.

ಇಬ್ಕೋಟ್‌ನ ಗ್ರಾಮಸ್ಥರು ಸೇನೆಯ ತ್ವರಿತ ಕ್ರಮ ಮತ್ತು ಸಹಾನುಭೂತಿಗೆ ಧನ್ಯವಾದ ಅರ್ಪಿಸಿದರು. ಸಮುದಾಯದ ಹಿರಿಯರು ಸೇನೆಯು ಪ್ರದೇಶದಲ್ಲಿ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಮಾತ್ರವಲ್ಲದೆ ಕಷ್ಟದ ಸಮಯದಲ್ಲಿ ಜನರೊಂದಿಗೆ ನಿಲ್ಲುವಲ್ಲಿಯೂ ವಹಿಸಿದ ಪಾತ್ರವನ್ನು ಶ್ಲಾಘಿಸಿದರು.

LEAVE A REPLY

Please enter your comment!
Please enter your name here