ಬೆಂಗಳೂರು: ಕನಿಷ್ಠ ಕತ್ತರಿಕೆಯ ಮೂತ್ರನಾಳದ ಚಿಕಿತ್ಸೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆ ಸಾಧಿಸಿದ್ದು ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಯುರೆಥ್ರಲ್ ಸ್ಟೆಂಟ್ ತಂತ್ರಜ್ಞಾನವನ್ನು ಭಾರತದಲ್ಲಿ ಅಳವಡಿಸಿಕೊಂಡ ಮೊದಲ ಆಸ್ಪತ್ರೆಯಾಗಿದ್ದು ಡಾ ಟಿ. ಮನೋಹರ್ ಮತ್ತು ಅವರ ತಂಡವು ಐವರು ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ.
ಎಕ್ಸೈಮ್ ಟೆಂಪರರಿ ಸ್ಟೆಂಟ್ ಅನ್ನು ಪ್ರೊಸ್ಟಾಟಿಕ್ ಮೂತ್ರನಾಳ ತೆರೆದಿರುವಂತೆ ವಿನ್ಯಾಸಗೊಳಿಸಲಾಗಿದ್ದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವವರೆಗೆ ಅಥವಾ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲದೇ ಇರುವಾಗ ಬಳಸಲಾಗುತ್ತದೆ. ಈ ಸ್ಟೆಂಟ್ ಅನ್ನು ಒಂದು ವರ್ಷ ಅಲ್ಲಿಯೇ ಇರಿಸಬಹುದಾಗಿದ್ದು ರೋಗಿಯ ಆರೋಗ್ಯ ಸುಧಾರಿಸುವವರೆಗೆ ಅಥವಾ ಮುಂದಿನ ಚಿಕಿತ್ಸೆ ಯೋಜಿಸುವವರೆಗೆ ಸ್ಥಿರತೆಗೆ ಅವಕಾಶ ಕಲ್ಪಿಸುತ್ತದೆ.
ಐವರು ರೋಗಿಗಳು
• 73 ವರ್ಷದ ತೀವ್ರ ಹೃದ್ರೋಗದ ಅಪಾಯವಿದ್ದ ರೋಗಿಗೆ.ಮರುಕಳಿಸುವ ಮೂತ್ರದ ತಡೆ, ಮೂತ್ರದ ಸೋಂಕುಗಳು ಮತ್ತು ಹಿಂದೆ ತೀವ್ರ ರೀತಿಯ ಯುರೋಸೆಪ್ಸಿಸ್ ನಿಂದ ಬಳಲುತ್ತಿದ್ದರು, ನಿರಂತರವಾಗಿ ರಕ್ತ ತೆಳುವಾಗಿಸುವ ಮಾತ್ರೆಗಳನ್ನು ಸೇವಿಸುತ್ತಿದ್ದರು ಮತ್ತು ಇತ್ತೀಚೆಗಷ್ಟೇ ಹೃದಯಾಘಾತದಿಂದ ಚೇತರಿಸಿಕೊಂಡಿದ್ದರು.
• ಪ್ರೊಸ್ಟೇಟ್ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ಪರಿಗಣಿಸಲಾದ 70 ವರ್ಷದ ರೋಗಿಯು ಮರುಕಳಿಸುವ/ಹರಡುವಿಕೆಯ ಯುರೋಥೀಲಿಯಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಮನಕಾರಿ ಚಿಕಿತ್ಸೆ ಪಡೆಯುತ್ತಿದ್ದರು.
• ಪಿಟಿಸಿಎ ನಂತರ ತೀವ್ರ ಮೂತ್ರದ ಲಕ್ಷಣಗಳು, ಮೂತ್ರದ ತಡೆ ಮತ್ತು ತಡೆಯೊಡ್ಡುವ ಯುರೋಪತಿ ಸಮಸ್ಯೆಗೆ ಒಳಗಾದ 66 ಮತ್ತು 83 ವರ್ಷದ ಇಬ್ಬರು ರೋಗಿಗಳು. ಇವರು ಕನಿಷ್ಠ 3 ತಿಂಗಳ ಕಾಲ ಡ್ಯುಯಲ್ ಆಂಟಿಪ್ಲೇಟ್‌ಲೆಟ್ ಥೆರಪಿಯಲ್ಲಿದ್ದ ಕಾರಣ, ಇವರ ಪ್ರೊಸ್ಟೇಟ್ ಶಸ್ತ್ರಚಿಕಿತ್ಸೆಯನ್ನು ಮುಂದೂಡಬೇಕಾಯಿತು.
• ಹಲವಾರು ಸಹ-ರೋಗಲಕ್ಷಣಗಳು ಮತ್ತು ಮೂತ್ರಕೋಶದ ವೈಫಲ್ಯವನ್ನು ಹೊಂದಿದ್ದು, ದೀರ್ಘಕಾಲದಿಂದ ಕ್ಯಾತಿಟರ್ ಮೇಲೆ ಅವಲಂಬಿತರಾಗಿದ್ದ 90 ವರ್ಷದ ರೋಗಿ. ಇವರಿಗೆ ಕ್ಯಾಥೆಟರ್ ಬಳಕೆಯನ್ನು ತಪ್ಪಿಸಲು ತಾತ್ಕಾಲಿಕ ಸ್ಟೆಂಟ್ ಅಳವಡಿಕೆಯನ್ನು ಪರ್ಯಾಯ ಆಯ್ಕೆಯಾಗಿ ಪರಿಗಣಿಸಲಾಯಿತು.
ಮೃದುವಾದ ನಿದ್ರಾಜನಕ ಮತ್ತು ಲೋಕಲ್ ಅನೆಸ್ಥೀಷಿಯಾ ನೀಡಿ ಈ ಪ್ರಕ್ರಿಯೆಯನ್ನು ನಡೆಸಲಾಯಿತು. ಪ್ರಕ್ರಿಯೆಯ ನಂತರ ಐದೂ ರೋಗಿಗಳು ಯಶಸ್ವಿಯಾಗಿ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಯಿತು. ಈ ಪ್ರಕ್ರಿಯೆಯು ಸರಾಸರಿ 10 ನಿಮಿಷಗಳನ್ನು ತೆಗೆದುಕೊಂಡಿತು. ರೋಗಿಗಳು ತಕ್ಷಣವೇ ಮೂತ್ರ ವಿಸರ್ಜನೆ ಮಾಡಲು ಶಕ್ತರಾದರು ಮತ್ತು ಅವರ ಮೂತ್ರಕೋಶದಲ್ಲಿ ಯಾವುದೇ ಶೇಷ ಮೂತ್ರ ಉಳಿಯದಿರುವುದು ಕಂಡುಬಂದಿತು. ಇದರಿಂದಾಗಿ ಅವರನ್ನು ತಕ್ಷಣವೇ ಕ್ಯಾತಿಟರ್ ಮುಕ್ತಗೊಳಿಸಲು ಸಾಧ್ಯವಾಯಿತು. ಈ ಚಿಕಿತ್ಸೆಯನ್ನು ಡೇ-ಕೇರ್ ನಲ್ಲಿ ನಡೆಸಲಾಯಿತು ಮತ್ತು ಯಾವುದೇ ತೊಂದರೆಗಳು ವರದಿಯಾಗಿಲ್ಲ. ನಂತರ ರೋಗಿಗಳನ್ನು ಮೂರು ವಾರಗಳ ಕಾಲ ತಪಾಸಣೆಗೆ ಒಳಪಡಿಸಲಾಯಿತು.
ಶಸ್ತ್ರಚಿಕಿತ್ಸೆಗೆ ಸೂಕ್ತವಾಗಿರುವ ರೋಗಿಗಳಲ್ಲಿ, ಈ ತಾತ್ಕಾಲಿಕ ಸ್ಟೆಂಟ್ ಅನ್ನು ಎಚ್.ಒ.ಎಲ್.ಇ.ಪಿ ಅಥವಾ ಟಿ.ಯು.ಆರ್.ಪಿ.ನಂತಹ ನಿರ್ಣಾಯಕ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಪರ್ಯಾಯವಾಗಿ ಬಳಸಲು ಉದ್ದೇಶಿಸಲಾಗಿಲ್ಲ.
ಬದಲಿಗೆ, ಹೃದಯ ಸಂಬಂಧಿ ತೊಂದರೆಗಳು, ರಕ್ತ ತೆಳುವಾಗಿಸುವ ಮಾತ್ರೆಗಳ ಬಳಕೆ, ಚಾಲ್ತಿಯಲ್ಲಿರುವ ಕ್ಯಾನ್ಸರ್ ಚಿಕಿತ್ಸೆ, ಇಳಿವಯಸ್ಸು ಅಥವಾ ಇತರ ತೀವ್ರತರವಾದ ವೈದ್ಯಕೀಯ ಅಪಾಯಗಳಿಂದಾಗಿ ಶಸ್ತ್ರಚಿಕಿತ್ಸೆಯನ್ನು ಕಡ್ಡಾಯವಾಗಿ ಮುಂದೂಡಬೇಕಾದ ರೋಗಿಗಳಲ್ಲಿ ಮಾತ್ರ ಇದನ್ನು ತಾತ್ಕಾಲಿಕ ಪರ್ಯಾಯ ಆಯ್ಕೆಯಾಗಿ ಬಳಸಲಾಗುತ್ತದೆ.
“ಆಗಲೇ ತೀವ್ರ ಆನಾರೋಗ್ಯದಿಂದ ಬಳಲುತ್ತಿರುವಂತಹ ರೋಗಿಗಳಿಗೆ, ಅವರ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಉಂಟುಮಾಡದೆ ಮೂತ್ರದ ತಡೆಯನ್ನು ನಿವಾರಿಸುವುದೇ ಮುಖ್ಯ ಸವಾಲಾಗಿದೆ. ಅಂತಹ ಸಂದರ್ಭಗಳಲ್ಲಿ, ನಾವು ರೋಗಿಯ ಮೂಲ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವವರೆಗೆ ಅಥವಾ ಕಾಯಂ ಚಿಕಿತ್ಸೆಯನ್ನು ಯೋಜಿಸುವವರೆಗೆ, ಈ ತಾತ್ಕಾಲಿಕ ಸ್ಟೆಂಟ್ ರೋಗಿಯು ಸುಲಭವಾಗಿ ಮೂತ್ರ ವಿಸರ್ಜನೆ ಮಾಡಲು ಒಂದು ಸುರಕ್ಷಿತ ಪರ್ಯಾಯ ಮಾರ್ಗವನ್ನು ನೀಡುತ್ತದೆ,” ಎಂದು ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ಅಪೋಲೋ ಪ್ರೊಸ್ಟೇಟ್ ಇನ್ಸ್ಟಿಟ್ಯೂಟ್, ರೀನಲ್ ಸೈನ್ಸಸ್ ಅಂಡ್ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದ ಇನ್ನೊವೇಟರ್ ಹಾಗೂ ಕ್ಲಿನಿಕಲ್ ಡೈರೆಕ್ಟರ್ ಡಾ. ಟಿ. ಮನೋಹರ್ ಹೇಳಿದರು.
ಡಾ.ಮನೋಹರ್, “ನಾವು ಇದನ್ನು ಕನಿಷ್ಠ ಕತ್ತರಿಕೆಯ ಶಸ್ತ್ರಚಿಕಿತ್ಸೆಯಾಗಿ ನೋಡುತ್ತಿದ್ದು ಇದು ಎಚ್ಚರಿಕೆಯಿಂದ ಆಯ್ದ ಬಿಪಿಎಚ್ ರೋಗಿಗಳಿಗೆ ಔಷಧಗಳಿಂದ ತೀವ್ರ ಅಡ್ಡ ಪರಿಣಾಮಗಳಿರುವಾಗ ಮತ್ತು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯ ತಡವಾದಾಗ ಅಥವಾ ಸೂಕ್ತವಿಲ್ಲದೇ ಇದ್ದಾಗ ಪರಿಗಣಿಸುತ್ತೇವೆ” ಎಂದರು.
ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಉದಯ್ ದಾವ್ಡಾ, “ತಕ್ಷಣದ ಶಸ್ತ್ರಚಿಕಿತ್ಸೆಗೆ ಸೂಕ್ತವಲ್ಲದ ವೈದ್ಯಕೀಯ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ, ಚಿಕಿತ್ಸಾ ಆಯ್ಕೆಗಳನ್ನು ವಿಸ್ತರಿಸುವುದು ಅವರ ಚಿಕಿತ್ಸೆಯಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ. ಎಕ್ಸೈಮ್ ತಂತ್ರಜ್ಞಾನವನ್ನು ಪರಿಚಯಿಸಿರುವುದು, ಚಿಕಿತ್ಸೆಯಲ್ಲಿರುವ ಇಂತಹ ಕೊರತೆಗಳನ್ನು ನೀಗಿಸುವಂತಹ ವೈದ್ಯಕೀಯ ಆವಿಷ್ಕಾರಗಳನ್ನು ಬೆಂಬಲಿಸಲು ಅಪೋಲೋ ಆಸ್ಪತ್ರೆ ಹೊಂದಿರುವ ಬದ್ಧತೆಯನ್ನು ಬಿಂಬಿಸುತ್ತದೆ. ಸೂಕ್ತ ರೋಗಿಗಳನ್ನು ಜಾಗರೂಕತೆಯಿಂದ ಆಯ್ಕೆ ಮಾಡುವುದು, ಮಾಹಿತಿ ಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ಸರಿಯಾದ ತಪಾಸಣೆ ನಡೆಸುವುದರ ಮೇಲೆಯೇ ನಮ್ಮ ಮುಖ್ಯ ಗಮನವಿದೆ” ಎಂದರು.
ಅಪೋಲೋ ಆಸ್ಪತ್ರೆಯ ವೈದ್ಯಕೀಯ ತಂಡವು ತಾತ್ಕಾಲಿಕ ಪ್ರೊಸ್ಟೇಟಿಕ್ ಸ್ಟೆಂಟ್‌ಗಳಿಗೆ ಭಾರತೀಯ ಆವೃತ್ತಿಯ ಬದಲಾವಣೆಗಳನ್ನು, ಅಂದರೆ ಗಾತ್ರವನ್ನು ಹೊಂದಿಸಬಹುದಾದ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪರಿಶೀಲಿಸುತ್ತಿದೆ. ಇದು ಪ್ರತಿಯೊಬ್ಬ ರೋಗಿಯ ಅಗತ್ಯಕ್ಕೆ ತಕ್ಕಂತೆ ಸ್ಟೆಂಟ್ ಸರಿಹೊಂದಿಸಲು ಹೆಚ್ಚಿನ ಅನುಕೂಲ ನೀಡುತ್ತದೆ.
ಈ ಐದು ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳು, ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಯಲ್ಲಿರುವ ಬಿಪಿಎಚ್ ರೋಗಿಗಳಿಗೆ ಕನಿಷ್ಠ ಕತ್ತರಿಕೆಯ ಚಿಕಿತ್ಸಾ ಆಯ್ಕೆಗಳನ್ನು ನೀಡುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ವಿಶೇಷವಾಗಿ ಕಾಯಂ ಚಿಕಿತ್ಸೆಗಾಗಿ ಕಾಯುತ್ತಿರುವಾಗ ಮರುಕಳಿಸುವ ಮೂತ್ರದ ತಡೆ ಅಥವಾ ದೀರ್ಘಕಾಲದ ಕ್ಯಾಥೆಟರ್ ಅವಲಂಬನೆಯನ್ನು ಎದುರಿಸುತ್ತಿರುವ ರೋಗಿಗಳಿಗೆ ಇದು ಹೆಚ್ಚು ಉಪಯುಕ್ತವಾಗಿದೆ.

