ಜಿಲ್ಲೆಯಲ್ಲಿ ಅನರ್ಹ ಬಿ.ಪಿ.ಎಲ್ ಕಾರ್ಡ್ ರದ್ದುಗೊಳಿಸಲು ಸೂಚನೆ

0
162


ಉಡುಪಿ: ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಗುರುತಿಸಲು ಕಟ್ಟುನಿಟ್ಟಿನ ಕ್ರಮವಹಿಸುವುದರೊಂದಿಗೆ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಬೇಕು ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಆರ್ಥಿಕ ಸ್ಥಿತಿಯು ರಾಷ್ಟçದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಸಮೀಕ್ಷೆ ಅನ್ವಯ ಸುಮಾರು 7 ಲಕ್ಷಕ್ಕೂ ಅಧಿಕ ಅನರ್ಹ ಬಿ.ಪಿ.ಎಲ್ ಕಾರ್ಡ್ಗಳು ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಇಂತಹ ಅನುಮಾಸ್ಪದ ಪಡಿತರ ಚೀಟಿಗಳನ್ನು ಪರಿಷ್ಕರಣಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಇಂತಹ ಪಡಿತರ ಚೀಟಿಗಳನ್ನು ಶೀಘ್ರದಲ್ಲಿ ಎ.ಪಿ.ಎಲ್ ಕಾರ್ಡ್ಗೆ ಪರಿವರ್ತಿಸುವಂತೆ ತಿಳಿಸಿದ ಅವರು, ಒಂದು ವೇಳೆ ಅರ್ಹ ಬಿಪಿಎಲ್ ಕಾರ್ಡ್ಗಳು ಎ.ಪಿ.ಎಲ್ ಎಂದು ಪರಿವರ್ತನೆ ಹೊಂದಿದ್ದಲ್ಲಿ ಅಂಥವರು ಸಂಬAಧಿಸಿದ ದಾಖಲೆಗಳನ್ನು ತಾಲೂಕಿನ ತಹಶೀಲ್ದಾರ್‌ಗಳಿಗೆ ಸಲ್ಲಿಸಿದ್ದಲ್ಲಿ ಅದನ್ನು ಶೀಘ್ರವೇ ಬಿಪಿಎಲ್ ಚೀಟಿಗೆ ಪರಿವರ್ತಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿದಾರರು ಪತ್ತೆಯಾದಲ್ಲಿ ಅಂತಹವರ ಪಡಿತರ ಚೀಟಿಗಳನ್ನು ಸರಕಾರದ ಮಾನದಂಡಗಳ ಅನ್ವಯ ಎ.ಪಿ.ಎಲ್ ಗೆ ಪರಿವರ್ತಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಪಡಿತರ ಚೀಟಿ ಅಕ್ಕಿಯನ್ನು ಅಕ್ರಮ ದಾಸ್ತಾನು ಅಥವಾ ಮಾರಾಟ ಮಾಡುತ್ತಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ರಶ್ಮಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 295 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, 1,95,058 ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳಿದ್ದು, ಒಟ್ಟು 8,31,846 ಫಲಾನುಭವಿಗಳಿದ್ದಾರೆ. ಪಡಿತರ ವಿತರಣೆಯಲ್ಲಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ಸೆಪ್ಟಂಬರ್ ಮಾಹೆಯಲ್ಲಿ 40375.45 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡುವುದರೊಂದಿಗೆ ಶೇ. 78.42 ಪ್ರಗತಿ ಸಾಧಿಸಲಾಗಿರುತ್ತದೆ ಎಂದರು.
ಜಿಲ್ಲೆಯಲ್ಲಿ ಇ-ಕೆ.ವೈ.ಸಿ ಕಾರ್ಯ ಶೇ. 99.30 ಪೂರ್ಣಗೊಂಡಿದೆ. ಮನೆ ಮನೆಗೆ ಭೇಟಿ ನೀಡಿ ಇ-ಕೆ.ವೈ.ಸಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸೆಪ್ಟಂಬರ್ ಮಾಹೆಯಲ್ಲಿ 2950 ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಅದರಲ್ಲಿ 2739 ಅನ್ನು ಆದ್ಯತೇತರ ಪಡಿತರ ಚೀಟಿಗಳಾಗಿ ಪರಿವರ್ತಿಸಲಾಗಿದ್ದು, ಬಾಕಿ ಉಳಿದ 211 ಪಡಿತರ ಚೀಟಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲಾಗುವುದು. ಜಿಲ್ಲೆಯಲ್ಲಿ ಆದ್ಯತಾ ಪಡಿತರ ಚೀಟಿಗೆ 13,947 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 13,412 ಅರ್ಜಿಗಳನ್ನು ವಿಲೇವಾರಿ ಮಾಡಿ, 535 ಅರ್ಜಿಗಳು ಬಾಕಿ ಇವೆ. ಆದ್ಯತೇತರ ಪಡಿತರ ಚೀಟಿಗೆ 12,332 ಅರ್ಜಿಗಳು ಸಲ್ಲಿಕೆಯಾಗಿ 10,294 ಅರ್ಜಿಗಳನ್ನು ವಿಲೇವಾರಿ ಮಾಡಿ, 2038 ಅರ್ಜಿಗಳ ವಿಲೇವಾರಿಗೆ ಬಾಕಿ ಇವೆ ಎಂದರು.
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ 9 ಪ್ರಕರಣಗಳು ದಾಖಲಾಗಿ 200.95 ಕ್ವಿಂಟಾಲ್ ಅಕ್ಕಿಯನ್ನು ಹಾಗೂ 3 ವಾಹನಗಳನ್ನು ವಶಪಡಿಸಿಕೊಂದು 2 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಂಗಡಿ ಮುಂಗಟ್ಟುಗಳು, ಮಾಲ್‌ಗಳು, ಪೆಟ್ರೋಲ್ ಪಂಪ್‌ಗಳಲ್ಲಿ ತೂಕ ಮತ್ತು ಅಳತೆಯ ತಪಾಸಣೆಯನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ಗ್ರಾಹಕರಿಗೆ ತೊಂದರೆ ಆಗದಂತೆ ಪ್ರತಿಯೊಂದು ಅಂಗಡಿಗಳನ್ನು ತಪಾಸಣೆ ನಡೆಸಿ ಮೋಸ ಕಂಡುಬAದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ದ.ಕ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here