ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮ, ವ್ಯವಹಾರ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಂಗಳೂರಿನ ಉದ್ಯಮಿ ಅಶ್ವಿನ್ ಜೋಯಲ್ ನೊರೊನ್ಹಾ ಅವರಿಗೆ ಅಂತರಾಷ್ಟ್ರೀಯ ಮಟ್ಟದ ಎರಡು ಮಹತ್ವದ ಶೈಕ್ಷಣಿಕ ಗೌರವಗಳು ಲಭಿಸಿವೆ.
ರಷ್ಯಾದ ಮಾಸ್ಕೋ ಮೂಲದ ಯುರೇಷಿಯನ್ ಮ್ಯಾನೇಜ್ಮೆಂಟ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಸ್ಕೂಲ್ (EMAS Business School) ವತಿಯಿಂದ ವ್ಯವಹಾರ ಆಡಳಿತ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಆರೆಂಜ್ ಕೌಂಟಿ ಯುನಿವರ್ಸಿಟಿ (Orange County University) ವತಿಯಿಂದ ಉದ್ಯಮಶೀಲತೆ ಮತ್ತು ಕಾರ್ಯತಂತ್ರದ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ಗೌರವ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಅಶ್ವಿನ್ ಜೋಯಲ್ ನೊರೊನ್ಹಾ ಅವರು ಉದ್ಯಮ ಸ್ಥಾಪನೆ, ವ್ಯವಹಾರ ನಿರ್ವಹಣೆ, ಹಣಕಾಸು ಸೇವೆಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ತಂತ್ರಜ್ಞಾನ ಹಾಗೂ ಸಂಸ್ಥೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯಮಶೀಲತೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿವಿಧ ಉದ್ಯಮ ಸಂಸ್ಥೆಗಳ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಹೊಸ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ವ್ಯವಹಾರ ನಿರ್ವಹಣೆಯಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ನವೆಂಬರ್ 29, 2026ರಂದು ನವದೆಹಲಿಯಲ್ಲಿ ನಡೆಯಲಿರುವ 2026ನೇ ಸಾಲಿನ EMAS Business School ಘಟಿಕೋತ್ಸವ ಸಮಾರಂಭದಲ್ಲಿ ಅವರು ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲಿದ್ದಾರೆ. ಅಮೆರಿಕದ Orange County University ವತಿಯಿಂದ ಉದ್ಯಮಶೀಲತೆ ಮತ್ತು ಕಾರ್ಯತಂತ್ರದ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ಗೌರವ ಪ್ರಾಧ್ಯಾಪಕ (Honorary Professor in Entrepreneurship and Strategic Business Management) ಗೌರವವೂ ಲಭಿಸಿದೆ.
ಮಂಗಳೂರಿನ ಉದ್ಯಮಿಯೊಬ್ಬರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡು ಮಹತ್ವದ ಶೈಕ್ಷಣಿಕ ಗೌರವಗಳು ಲಭಿಸಿರುವುದು ಜಿಲ್ಲೆಯ ಉದ್ಯಮ ವಲಯದಲ್ಲಿ ಗಮನ ಸೆಳೆದಿದೆ.

