ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಡ್ರಾಪ್ ಮತ್ತು ಪಿಕಪ್ ಮಾಡಲು ಬರುವ ಆಟೋರಿಕ್ಷಾ ಚಾಲಕರಿಂದ ಪ್ರತಿ ಪ್ರವೇಶಕ್ಕೆ ₹50 ಶುಲ್ಕ ವಸೂಲಿ ಮಾಡುತ್ತಿರುವುದರಿಂದ ರಿಕ್ಷಾ ಬಂಧುಗಳಿಗೆ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ಪರಿಹರಿಸುವಂತೆ ಭಾರತೀಯ ಮಜ್ದೂರ್ ಸಂಘ (BMS), ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಇಂದು ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಯಾಣಿಕರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಹೋಗುವಾಗ ಹಾಗೂ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರನ್ನು ಪಿಕಪ್ ಮಾಡಲು ಪ್ರವೇಶಿಸುವಾಗಲೂ ₹50 ಶುಲ್ಕ ಪಾವತಿಸಬೇಕಾಗುತ್ತಿದೆ. ಎರಡೂ ಸಂದರ್ಭಗಳಲ್ಲಿ ಶುಲ್ಕ ಪಾವತಿಸಿ ರಸೀದಿ ಪಡೆಯಬೇಕಾಗಿರುವುದರಿಂದ ಆಟೋರಿಕ್ಷಾ ಚಾಲಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ. ಇಂಧನ ವೆಚ್ಚ, ವಾಹನ ನಿರ್ವಹಣೆ ಹಾಗೂ ಇತರ ಖರ್ಚುಗಳನ್ನು ಭರಿಸುವ ರಿಕ್ಷಾ ಬಂಧುಗಳ ಜೀವನೋಪಾಯದ ಮೇಲೆ ಇದು ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಯಿತು.
ಆಟೋರಿಕ್ಷಾ ಚಾಲಕರ ಸಮಸ್ಯೆಯನ್ನು ಆಲಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಈ ವಿಚಾರವಾಗಿ ಸಂಬಂಧಪಟ್ಟ ಕಂಪನಿಯೊಂದಿಗೆ ಶೀಘ್ರದಲ್ಲೇ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಅನಿಲ್ ಕುಮಾರ್ ಯು., ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ರಿಕ್ಷಾ ಯೂನಿಯನ್ ಮುಖಂಡರಾದ ಉಮೇಶ್ ಇಡ್ಯಾ (ಸುರತ್ಕಲ್) ಹಾಗೂ ಲೋಕಯ್ಯ ಉಪಸ್ಥಿತರಿದ್ದರು.
ಇಡೀ ಭಾರತ ದೇಶದ ವಿಮಾನ ನಿಲ್ದಾಣದಲ್ಲಿ ರಿಕ್ಷಾ ಚಾಲಕರಿಗೆ ಸುಂಕ ವಿಧಿಸುವುದಿಲ್ಲ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಿಕ್ಷಾ ಚಾಲಕರಲ್ಲಿ ಸುಂಕ ವಸೂಲಿ ಯಾಕೆ ಮಾಡುತ್ತಾರೆ ?? ತಕ್ಷಣ ಇದನ್ನು ರದ್ದುಗೊಳಿಸಬೇಕು.. ಇದೇ ರೀತಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು.
ಸುರತ್ಕಲ್ B. M. S. ಆಟೋರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಗೌರವ್ಯಾಧ್ಯಕ್ಷರಾದ ಸತೀಶ್ ಮುಂಚೂರು, ವಸಂತ ಹೊಸಬೆಟ್ಟು ಮಾಜಿ ಸೈನಿಕ ಲೀಲಾ ದರ ಕಡಂಬೋಡಿ ಉಮೇಶ್. ಐ. ಅಧ್ಯಕ್ಷರು ರಮೇಶ್ ಟಿ ಸುವರ್ಣ ತೋಕೂರು ಸುಂಕ ವಸೂಲಿ ರದ್ದುಗೊಳಿಸಿದ್ದರೆ ಎಲ್ಲಾ ರಿಕ್ಷಾ ಚಾಲಕರು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

