ಪಶ್ಚಿಮ ಘಟ್ಟ ಕಸ್ತೂರಿ ರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನಕ್ಕಾಗಿ ಐವನ್ ಡಿಸೋಜ ಆಗ್ರಹ

0
19

ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎನ್ನುವುದು ನಿಜ. ಆದರೆ ಅಲ್ಲಿ ಈಗಾಗಲೇ ಸಾಕಷ್ಟು ಜನ ವಸತಿ ನೆಲೆಸಿದ್ದು ಜನರು ತಮ್ಮ ಜೀವನೋಪಾಯಕ್ಕಾಗಿ ಅರಣ್ಯವನ್ನೇ ಅವಲಂಬಿಸಿಕೊಂಡಿರುತ್ತಾರೆ. ಅಂತಹ ಜನರನ್ನು ಆ ಪ್ರದೇಶದಿಂದ ದೂರ ಮಾಡಿಸುವ, ಅವರ ದಿನ ನಿತ್ಯದ ಕಾರ್ಯಗಳಿಗೆ ಅಡ್ಡಿಪಡಿಸುವ ಕಾರ್ಯ ಅರಣ್ಯ ಇಲಾಖೆಯವರಿಂದ ನಡೆಯುತ್ತಿದೆ.

ಇಲಾಖೆಯ ಅಧಿಕಾರಿಗಳು ದಬ್ಬಾಳಿಕೆಯಿಂದ ಜನರನ್ನು ಒಕ್ಕಲೆಬ್ಬಿಸುವ, ಕೃಷಿ ಇತರ ಕಾರ್ಯಗಳಿಗೆ ಅಡ್ಡಿಪಡಿಸುವ ಕೆಲಸವನ್ನು ಮಾಡಬಾರದು. ಡಾ.ಕಸ್ತೂರಿರಂಗನ್ ವರದಿಯ ಬಗ್ಗೆ ವಿಧಾನಸಭೆಯಲ್ಲಿ ಸಾಧಕ ಬಾಧಕ ಚರ್ಚೆಯ ತರುವಾಯ ಆ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ತೊಂದರೆಯಿಂದಾಗಿ ಅಭಿವೃದ್ಧಿಯ ಕಾರ್ಯಗಳು ಕುಂಠಿತಗೊಂಡಿದೆ.

ಪಶ್ಚಿಮ ಘಟ್ಟ ಪ್ರದೇಶ ಅಂತಾರಾಜ್ಯ ವ್ಯಾಪ್ತಿಯನ್ನು ಹೊಂದಿರುವುದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ನಮ್ಮ ರಾಜ್ಯದಲ್ಲಿ ಒಟ್ಟು 10 ಜಿಲ್ಲೆಯ 33 ತಾಲೂಕುಗಳ 1533 ಗ್ರಾಮ ಪಂಚಾಯಿತಿಗಳಲ್ಲಿ ಈ ಪರಿಸರ ವ್ಯಾಪಿಸಿದ್ದು 56,000 ಹೆಕ್ಟೇರ್ ಪ್ರದೇಶದಲ್ಲಿದೆ.

ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿ, ಜಲಮೂಲ, ಪರಿಸರ, ಕೃಷಿ ಇತ್ಯಾದಿ ಎಲ್ಲವೂ ಜನರೊಂದಿಗೆ ಸಂಬಂಧವನ್ನು ಹೊಂದಿದೆ. ನಕ್ಷೆಯನ್ನು ನೋಡಿ, ವೈಮಾನಿಕ ಸಮೀಕ್ಷೆ ಮೂಲಕ ನಿರ್ಧರಿಸುವ ಬದಲು ಆಯಾ ಗ್ರಾಮ ಪಂಚಾಯತ್, ತಾಲೂಕು, ಜಿಲ್ಲೆ, ರಾಜ್ಯ ಗಳ ಪ್ರಜಾಪ್ರತಿನಿಧಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೇಂದ್ರ ಸರ್ಕಾರವನ್ನು ಅಗ್ರಹಿಸಿದರು.

ಸೈಬರ್ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಐವನ್ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಈಗ ಸೈಬರ್ ಸೆಲ್ ಹಾಗೂ ಮಹಿಳೆಯರ ಸುರಕ್ಷತೆಯ ಬಗ್ಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಮಲೆನಾಡು ಹಾಗೂ ಕರಾವಳಿ ಪ್ರದೇಶವನ್ನು ಒಟ್ಟುಗೂಡಿಸಿ ಅಭಿವೃದ್ಧಿ ಮಾಡುವ ಯೋಜನೆಯ ದೃಷ್ಟಿಯಿಂದ ನಿಗಮವನ್ನು ಸ್ಥಾಪಿಸಲು ಹಾಗೂ ಸೂಕ್ತ ಅಧಿಕಾರಿಗಳನ್ನು ನೇಮಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 3 ಕೋಟಿ ನೀಡುವ ಬಗ್ಗೆ ಹಿಂದೆ ನಿರ್ಧರಿಸಿದ್ದರು ಕೂಡ 25 26 ನೇ ಸಾಲಿನಲ್ಲಿ 58 ಲಕ್ಷ ಹಂಚಿಕೆ ಮಾಡಲಾಗಿದ್ದು ಮೊದಲನೇ ಕಂತಿನ ಅನುದಾನ 14.5 ಲಕ್ಷ ಗಳನ್ನು ಬಿಡುಗಡೆ ಮಾಡಿದ ಮಾಡಲಾಗಿರುತ್ತದೆ. ಉಳಿದಂತೆ ಕಾಮಗಾರಿ ನಡೆದಂತೆಯೇ ಸೂಕ್ತ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು,

ವಸತಿ ವಿದ್ಯಾರ್ಥಿ ನಿಲಯಗಳಿಗೆ ಜಿಲ್ಲಾ ಹಂತದಲ್ಲಿ ಟೆಂಡರ್ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಲಾಗಿದೆ. ವನ್ಯಜೀವಿ ಮಾನವ ಸಂಘರ್ಷವನ್ನು ವಿವಿಧ ನಿರ್ಮಾಣ ಹಾಗೂ ಕಾರ್ಯಪಡೆಗಳ ಮೂಲಕ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ವನ್ಯಜೀವಿಗಳ ಅವಸ ಸ್ಥಾನ ಅಭಿವೃದ್ಧಿಪಡಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಅದಕ್ಕಾಗಿ ಸೂಕ್ತ ಅನುದಾನವನ್ನು ನೀಡಲಾಗಿದೆ.

ಬೆಳೆ ಹಾನಿ ಉಂಟಾದಲ್ಲಿ ಸಂಪ್ರಷ್ಟ ರೈತರಿಗೆ ಪರಿಹಾರ ಧನದ ಗರಿಷ್ಠ ಮಿತಿಯನ್ನು 50,000 ದಿಂದ ಒಂದು ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ದಾಖಲೆಯನ್ನು ಬಿಡುಗಡೆ ಮಾಡಿದರು.

ದಕ್ಷಿಣ ಕನ್ನಡದಲ್ಲಿ ಒಟ್ಟು 107 ಪಶುವೈದ್ಯ ಸಂಸ್ಥೆಗಳಿದ್ದು ಹೆಚ್ಚಿನ ಖಾಯಂ ವೃಂದದ ಮೂಲಕ ಹಾಗೂ ಸ್ವಂತ ಕಟ್ಟಡಗಳಲ್ಲಿ ಚಿಕಿತ್ಸಾಲಯಗಳು ನಡೆಯುತ್ತಿದೆ. ಅಮೃತ್ 2 ಯೋಜನೆ ಅಡಿ 233 ಕುಡಿಯುವ ನೀರು ಯೋಜನೆ ಕಾರ್ಯ ಹಂತದಲ್ಲಿದೆ ಅದಕ್ಕಾಗಿ 705 ಕೋಟಿ ರೂಪಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೊಳಗೇರಿ ನಿವಾಸಿಗಳಿಗೆ 2806 ಲಕ್ಷಗಳ ಯೋಜನಾ ವೆಚ್ಚದಲ್ಲಿ 500 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದರು ತಾಂತ್ರಿಕ ಕಾರಣಗಳಿಂದ ಅನುಷ್ಠಾನದಲ್ಲಿ ವಿಳಂಬವಾಗಿದೆ ಎಂಬ ಮಾಹಿತಿಯನ್ನು ವರದಿಗಾರರಿಗೆ ನೀಡಿದರು.

ಶಾಸಕರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ ಏಳು ಜನ ಅರ್ಜಿದಾರರಿಗೆ 564,694 ಪರಿಹಾರ ಧನವನ್ನು ಬಿಡುಗಡೆ ಮಾಡಲಾಯಿತು. ಬೋಳೂರು ನವೀನ್ ಕೋಟ್ಯಾನ್ ರಿಗೆ 2 ಲಕ್ಷ, ಕಣ್ಣೂರು ನಾಜಿಯ ಮಮ್ತಾಜ್ 1.92 ಲಕ್ಷ, ಪುತ್ತೂರು ಕುಮಾರ್ ಫಾರೂಕ್ 1.97 ಲಕ್ಷ, ಕಿನ್ನಿಗೋಳಿ ಹೇಮಲತಾ ರೂ 27. 74ಸಾವಿರ, ಹಾಗೂ ಇತರ ಮೂರು ಮಂದಿ.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಮಾಜಿ ಕಾರ್ಪೊರೇಟರ್ ಕೆ ಭಾಸ್ಕರ್ ರಾವ್, ಮೀನಾ ಟೆಲಿಸ್, ಇಮ್ರಾನ್ ಎ ಆರ್, ಮನೋರಾಜ್, ಸತೀಶ್ ಪೆಂಗಲ್, ಅಬೀಬುಲ್ಲಾ ಹಾಗೂ ಇತರರು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್