ಉಡುಪಿ : ಜೈ ತುಲುನಾಡ್ (ರಿ.) ಉಡುಪಿ ಘಟಕದ ವತಿಯಿಂದ “ತುಲುವೆರೆ ಆಟಿ” ಎನ್ನುವ ಕಾರ್ಯಕ್ರಮವು ಜುಲೈ 26 ರ ಆದಿತ್ಯವಾರ ಉಡುಪಿಯ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು. ಈ ವಿಶೇಷ ಕಾರ್ಯಕ್ರಮವು ಸಂಪ್ರದಾಯ, ಪ್ರಕೃತಿ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವಂತಾಗಿತ್ತು.
ಅತಿಥಿಯಾಗಿ ಆಗಮಿಸಿದಂತಹ ಅಳುಪ ವಂಶಸ್ತರಾದ ಡಾ ಆಕಾಶ್ ರಾಜ್ ಜೈನ್ ಹೆಸರುಕಾಳನ್ನು ಹಾಕಿ ಬೀಸುಗಲ್ಲನ್ನು ತಿರುಗಿಸುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉದ್ಘಾಟಕರಾದ ಡಾ.ಆಕಾಶ ರಾಜ್ ಜೈನ್ (ಆಳುಪ ವಂಶಸ್ಥರು ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು), ಈ ಸಂದರ್ಭದಲ್ಲಿ ಮಾತನಾಡುತ್ತಾ
“ಆಟಿಡೊಂಜಿ ದಿನವು ಕೇವಲ ಒಂದು ಆಚರಣೆ ಅಲ್ಲ, ಅದು ತುಳುನಾಡಿನ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವ ಸಂದೇಶವನ್ನು ನೀಡುತ್ತದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವು ಸಮತೋಲನದಲ್ಲಿದ್ದರೆ ಮಾತ್ರ ಶ್ರೇಷ್ಠವಾದ ಜೀವನ ಸಾಧ್ಯ. ಇತ್ತೀಚಿನ ಹವಾಮಾನ ಬದಲಾವಣೆಗಳು, ಮಳೆಯ ಕೊರತೆ ಇತ್ಯಾದಿಗಳು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡ ಪರಿಣಾಮಗಳಾಗಿವೆ. ಆದ್ದರಿಂದ ನೈಸರ್ಗಿಕ ವಸ್ತುಗಳ ಬಳಕೆಯನ್ನು ಹೆಚ್ಚಿಸಬೇಕು,” ಎಂದು ಹೇಳಿದರು.
ಜೈ ತುಲುನಾಡ್(ರಿ.) ಸಂಸ್ಥೆಯ ಸ್ಥಾಪಕ ಸಮಿತಿಯ ಸದಸ್ಯರು ಹಾಗೂ ಬೆಂಗಳೂರು ಘಟಕದ ಉಪಾಧ್ಯಕ್ಷ ರಾದ ಶರತ್ ಕೊಡವೂರು ಮಾತನಾಡಿ, “ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಬೇಕಾದರೆ ನಾವು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು,” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜೈ ತುಲುನಾಡ್ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಸಂತೋಷ್.ಎನ್.ಎಸ್. ಕಟಪಾಡಿ ಬೇಸರ ವ್ಯಕ್ತಪಡಿಸಿ, “ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತುಳುವರು, ಕಾರ್ಯಕ್ರಮವನ್ನು ಆಯೋಜಿಸುವವರೂ ತುಳುವರು, ಆದರೆ ಕಾರ್ಯಕ್ರಮಗಳಲ್ಲಿ ಕನ್ನಡ ಮತ್ತು ಇತರ ಭಾಷೆಗಳ ಬಳಕೆ ತುಳು ಭಾಷೆಗಿಂತ ಹೆಚ್ಚು ಆಗುತ್ತಿರುವುದು ವಿಷಾದನೀಯ,” ತುಳು ಸಂಬಂಧಿತ ಕಾರ್ಯಕ್ರಮಗಳು ತುಳು ಭಾಷೆಯಲ್ಲಿಯೇ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಎಂದು ತಿಳಿಸಿದರು.
ಗೌರವ ಅತಿಥಿಯಾಗಿ ಆಗಮಿಸಿದಂತಹ ಉಡುಪಿ ಜಿಲ್ಲೆಯ ಪ್ರಸಿದ್ಧ ಉದ್ಯಮಿ ಹಾಗೂ ಕಾಂಚನ್ ಹುಂಡೈ ಮಾಲಕರಾದ ಪ್ರಸಾದ್ ರಾಜ್ ಕಾಂಚನ್ ಅವರು ಮಾತನಾಡಿ,
“ತುಳು ಭಾಷೆ ಮತ್ತು ತುಳು ಸಂಸ್ಕೃತಿ ಉಳಿಯಬೇಕು; ಅದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ,” ಎಂದು ತಿಳಿಸಿ, ಜೈ ತುಲುನಾಡು ಸಂಘಟನೆಯ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಶ್ಲಾಘಿಸಿದರು.
ನಂತರ ತುಳು ಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಹಾಗೂ ತುಳು ಲಿಪಿ ಶಿಕ್ಷಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ತುಳುನಾಡಿನ ಜನಪದ ಸಾಂಪ್ರದಾಯಿಕ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಹಾಗೆಯೇ ಎಸ್.ಯು. ಪಣಿಯಾಡಿ ನೆಂಪು ಆನ್‌ಲೈನ್ ಸ್ಪರ್ಧೆಯ ವಿಜೇತರಿಗೆ ಸಹ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶ್ವಥ್ ತುಳುವೆ ಹಾಗೂ ಸ್ಥಾಪಕ ಸಮಿತಿಯ ಸದಸ್ಯರಾದ ಸದಾಶಿವ ಮುದ್ರಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜೈ ತುಲುನಾಡ್(ರಿ.) ಉಡುಪಿ ಘಟಕದ ಜೊತೆ ಖಜಾಂಚಿ ಡಾ. ನಿತೀಶ್ ಎಸ್.ಎ ಬೈಲೂರು ಅವರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಜ್ಞಾಶ್ರೀ ಅವರು ಜೈ ತುಲುನಾಡ್ (ರಿ.)ಸಂಸ್ಥೆಯು ನಡೆದು ಬಂದ ದಾರಿ ಹಾಗೂ ಸಾಧನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ವೀರೇಂದ್ರ ಶೆಟ್ಟಿ ಕೊಡಂಕೂರು ಅವರು ವಂದಿಸಿದರು. ಸದಸ್ಯರಾದ ನಿಧಿ ಕೆ. ದೇವಾಡಿಗ ಹಾವಂಜೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ತುಲುವೆರೆ ಆಟಿ ಕಾರ್ಯಕ್ರಮದ ಅಂಗವಾಗಿ ಸಂಘಟನೆಯ ಸದಸ್ಯರು ಸಿದ್ಧಪಡಿಸಿದ ತುಳುನಾಡಿನ ಆಟಿಯ ವಿಶೇಷ ಖಾದ್ಯಗಳನ್ನು ಜನರಿಗೆ ವಿತರಿಸಲಾಯಿತು.
