ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿನಾಡಿನ ಹೆಮ್ಮೆಯ ಸಂಸ್ಥೆಯಾದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ಕನ್ನಡ ಭವನ ಪ್ರಕಾಶನ ವತಿಯಿಂದ ‘ಕನ್ನಡ ಭವನದ ಯುವ ಪ್ರತಿಭಾ ಪುರಸ್ಕಾರ – ಭರವಸೆಯ ಬೆಳಕು (Student Achievement Award 2026)’ ಪ್ರದಾನ ಸಮಾರಂಭವು ಆಗಸ್ಟ್ 2ರಂದು (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ.
2025–26ನೇ ಶೈಕ್ಷಣಿಕ ವರ್ಷದಲ್ಲಿ 90% ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇದೇ ವೇದಿಕೆಯಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ‘ಭರವಸೆಯ ಶಿಕ್ಷಣ ರತ್ನ – Teachers Achievement Award’ ನೀಡಿ ಗೌರವಿಸಲಾಗುವುದು. ಜೊತೆಗೆ, ಗಾಯನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕನ್ನಡ ಭವನದ ಹಿತೈಷಿ ಅನ್ವಿತಾ ಶೆಣೈ ಅವರಿಗೆ ‘ಕನ್ನಡ ಪಯಸ್ವಿನಿ ನಾದ ರತ್ನ – Achievement Award 2026’ ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದು, ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ವಿದ್ಯಾನಂದ ಹೂಡೆ, ಸತೀಶ್ ಕೆ., ದಿನೇಶ್ ನಾಗರಕಟ್ಟೆ, ರಾಜೇಶ್ ಕೋಟೆಕಣಿ, ರೇಖಾ ಸುದೇಶ್ ರಾವ್, ಗಿರೀಶ್ ಪಿ.ಎಂ., ಪ್ರದೀಪ್ ನಾಯ್ಕ್, ನಗರಸಭಾ ಸದಸ್ಯೆಯರಾದ ಸುಧಾರಾಣಿ ಅನಂಗೂರ್, ದಿವ್ಯಾ ಸುಂದೀಪ್ ನಾಗರಕಟ್ಟೆ ಹಾಗೂ ಶ್ರುತಿ ವಿಕಾಸ್ ಕೋಟೆಕಣಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಸಂದ್ಯಾ ರಾಣಿ ಟೀಚರ್ ಸ್ವಾಗತಿಸಲಿದ್ದು, ವಸಂತ್ ಕೆರೆಮನೆ ವಂದನಾರ್ಪಣೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮ ನಿರ್ವಹಣೆಯನ್ನು ರೇಖಾ ಸುದೇಶ್ ರಾವ್ ಹಾಗೂ ಗಿರೀಶ್ ಪಿ.ಎಂ. ನಡೆಸಲಿದ್ದಾರೆ.
ಈ ಸಮಾರಂಭದಲ್ಲಿ ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂದ್ಯಾ ರಾಣಿ ಟೀಚರ್ ಮನವಿ ಮಾಡಿದ್ದಾರೆ.

