ದೇಲಂಪಾಡಿ : ‘ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಆರಂಭವಾದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯ ತರಬೇತಿ ಅಭಿಯಾನವು ಸಮಯೋಚಿತ. ಈ ಕನ್ನಡ ಪರವಾದ ಅಭಿಯಾನವು ಎಲ್ಲಾ ಶಾಲೆಗಳಿಗೂ ವಿಸ್ತರಿಸಿ, ಕನ್ನಡ ಭಾಷಾ ಜಾಗೃತಿಯನ್ನು ಬಲ ಪಡಿಸಲಿ. ಗದ್ಯ, ಪದ್ಯ ಮೊದಲಾದ ಸಾಹಿತ್ಯ ಪ್ರಕಾರಗಳ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವು ವಿದ್ಯಾರ್ಥಿಗಳಿಗೆ ಈ ಮೂಲಕ ದೊರಕಿದೆ.’ ಎಂದು ಕಸಾಪ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹೇಳಿದರು. ಅವರು ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಅಭಿಯಾನಕ್ಕೆ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಘಟಕದ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಅವರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿ ಚಾಲನೆ ನೀಡಿ ಮಾತನಾಡಿದರು. ಹಿರಿಯ ಯಕ್ಷಗಾನ ಗುರುಗಳಾದ ವಿಶ್ವ ವಿನೋದ ಬನಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ವಾಮನ್ ರಾವ್ ಬೇಕಲ್ ಮಾತನಾಡಿ,’ಕನ್ನಡಕ್ಕಾಗಿ ತಾನೇನು ಮಾಡಬೇಕು ಎಂಬ ಬಗ್ಗೆ ಕನ್ನಡಿಗರು ಆತ್ಮಾವಲೋಕನ ಮಾಡಬೇಕಾಗಿದೆ. ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸಿ, ಕನ್ನಡ ನುಡಿ ಹಾಗೂ ಸಂಸ್ಕೃತಿಯನ್ನು ಬೆಳೆಸಬೇಕು’ ಎಂದು ಹೇಳಿದರು. ಸಭೆಯಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಮಂಗಲಾ ಸಿ ಹೆಚ್, ಶಾಲಾ ಎಸ್ ಎಂ ಸಿ ಉದಯ. ಕುಮಾರ ದೇಲಂಪಾಡಿ, ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಇದ್ದರು. ಈ ಸಂದರ್ಭದಲ್ಲಿ ನಡೆದ ಚುಟುಕು ರಚನಾ ಕಮ್ಮಟದಲ್ಲಿ ಶಿಕ್ಷಣ ತಜ್ಞ ವಿ. ಬಿ ಕುಳಮರ್ವ ಹಾಗೂ ವ್ಯಂಗ್ಯಚಿತ್ರ ರಚನಾ ಕಮ್ಮಟದಲ್ಲಿ ಸಾಹಿತಿ ವಿರಾಜ್ ಅಡೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಚಟುವಟಿಕೆಗಳ ಹಸ್ತಪ್ರತಿ ಸಂಕಲನವಾದ,’ಕಾವ್ಯ ಕಾರಂಜಿ ‘ ಹಾಗೂ ‘ವ್ಯಂಗ್ಯಾಂತರಂಗ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಶಾಲೆಯ ಶಿಕ್ಷಕಿಯರಾದ ಜಲಜಾಕ್ಷಿ ಟೀಚರ್, ಶೈಲಜಾ ಟೀಚರ್, ಪ್ರತಿಭಾ ಟೀಚರ್, ಆಶಾಲತ ಟೀಚರ್ ಸಹಕರಿಸಿದರು. ಶಿಕ್ಷಕ ಸುನಿಲ್ ಕುಮಾರ ಮಯ್ಯಳ ಸ್ವಾಗತಿಸಿದರು. ಸಂಧ್ಯಾರಾಣಿ ಟೀಚರ್ ವಂದಿಸಿದರು. ವಾಹಿನಿ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಸ್ದಳದಲ್ಲೇ ನಡೆದ ಚುಟುಕು ಮತ್ತು ವ್ಯಂಗ್ಯಚಿತ್ರ ಸ್ಪರ್ಧಾ ವಿಜೇತರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು.