ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ – ಯೋಧ ನಮನ ಕಾರ್ಯಕ್ರಮ

0
15

ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್ ವಿಜಯ – ಯೋಧ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ್ ಶೆಟ್ಟಿಗಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ,ಕಾರ್ಗಿಲ್ ಯುದ್ಧವು ಕೇವಲ ಗಡಿಯನ್ನು ರಕ್ಷಿಸುವ ಹೋರಾಟವಾಗಿರಲಿಲ್ಲ, ಅದು ಭಾರತದ ಏಕತೆ, ಸಾರ್ವಭೌಮತ್ವ ಮತ್ತು ಸ್ವಾಭಿಮಾನದ ರಕ್ಷಣೆಯ ಹೋರಾಟವಾಗಿತ್ತು. ಸಾವಿರಾರು ಅಡಿ ಎತ್ತರದ ಹಿಮಾವೃತ ಪರ್ವತಗಳಲ್ಲಿ ನಮ್ಮ ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಪಾಡಿದರು.

ಅವರ ತ್ಯಾಗ ಮತ್ತು ಶೌರ್ಯದಿಂದ ಇಂದು ನಾವು ಸುರಕ್ಷಿತವಾಗಿ ಬದುಕುತ್ತಿದ್ದೇವೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಸೇರಿದಂತೆ ಅನೇಕ ವೀರಯೋಧರ ಸಾಹಸ ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಿದೆ. ಅವರ ದೇಶಪ್ರೇಮ, ಕರ್ತವ್ಯನಿಷ್ಠೆ ಮತ್ತು ಧೈರ್ಯ ಪ್ರತಿಯೊಬ್ಬ ಭಾರತೀಯನಿಗೂ ಆದರ್ಶವಾಗಿದೆ.ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿಎಂಬ ಮಾತಿನಂತೆ ಇಂದಿನ ಯುವ ಜನಾಂಗ ಈ ಪುಣ್ಯ ಮಣ್ಣಿನ ಸಾರ್ಥಕ್ಯವನ್ನು ಅರಿತುಕೊಂಡು ದೇಶದ ಆಂತರಿಕ ಭದ್ರತೆಗೆ ಮುಳುವಾಗದೆ ಸುಸಂಸ್ಕೃತ ಪ್ರಜೆಗಳಾಗಬೇಕು ಎಂದು ಕಿವಿಮಾತು ನುಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಮ್ , ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್ , ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.