ಬೋಳ ಗ್ರಾಮದ ಮಲಕ್ಯರ್ ಕಡ್ಕನ್ ನಾರಾಯಣ ಶೆಟ್ಟಿ ಎಂಬವರ ತೋಟದ ಬಾವಿಗೆ ಬಿದ್ದು ಚಿರತೆ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಚಿರತೆಯು ಸುಮಾರು ಮೂರು ವರ್ಷ ಪ್ರಾಯದ ಗಂಡು ಚಿರತೆ ಎಂದು ಗುರುತಿಸಲಾಗಿದೆ. ಕುಟುಂಬದ ಸದಸ್ಯರು ನೀರು ಸೇದಲು ಬಾವಿಯ ಬಳಿ ಹೋದಾಗ ಚಿರತೆ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ಕೂಡಲೇ ಅರಣ್ಯಾಧಿಕಾರಿ ಹುಕ್ರಪ್ಪ ಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಯಿಯನ್ನು ಅಟ್ಟಿಸಿಕೊಂಡು ಹೋಗುವಾಗ ಚಿರತೆಯು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯಾಧಿಕಾರಿ ಹುಕ್ರಪ್ಪ ಗೌಡ ನೇತೃತ್ವದ ತಂಡವು ಚಿರತೆಯ ದೇಹವನ್ನು ಬಾವಿಯಿಂದ ಮೇಲೆತ್ತಿ, ಪಶುವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿತು. ನಂತರ ನಿಯಮಾನುಸಾರ ಚಿರತೆಯ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

