ಕೇರಳ ಟೆಕ್ಕಿಯ ಟ್ರೆಕ್ಕಿಂಗ್ ಕಥೆ ಅನುಮಾನಾಸ್ಪದ : ನಾಪತ್ತೆಯ ಹಿಂದೆ ಸಂಚು ಸುಳಿವು..!

0
101

ಮಡಿಕೇರಿಯ ತಡಿಯಾಂಡಮೋಲ್‌ ಚಾರಣಕ್ಕೆ ಹೋದ ಸಂದರ್ಭದಲ್ಲಿ ದಾರಿ ತಪ್ಪಿ ನಾಪತ್ತೆಯಾಗಿ ಸುಮಾರು ನಾಲ್ಕು ದಿನಗಳ ಬಳಿಕ ದಟ್ಟ ಅರಣ್ಯದಲ್ಲಿ ಕೇರಳ ಮೂಲದ ಟೆಕ್ಕಿ ಜಿ.ಎಸ್​. ಶರಣ್ಯ ಪತ್ತೆಯಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಕೇವಲ ಒಂದು ಬಾಟಲಿ ನೀರಿನಲ್ಲಿ ಆ ಕಾಡಿನಲ್ಲಿ ಜೀವ ಭಯದ ನಡುವೆಯೂ ಬದುಕಿ ಬಂದಿದ್ದನ್ನು ಎಲ್ಲರು ಕೊಂಡಾಡುತ್ತಿರುವಾಗ ಕೇರಳ ಟೆಕ್ಕಿಯ ಚಾರಣ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ.

ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದೇ ಸುಳ್ಳು ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಶರಣ್ಯ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಕೂಡ ಆರಂಭವಾಗಿದೆ. ಕೇರಳ ಟೆಕ್ಕಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ರಾಜ್ಯ ಬಿಜೆಪಿ ನಾಯಕರು ನೀಡಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.

36 ವರ್ಷದ ಶರಣ್ಯ ಓರ್ವ ಐಟಿ ಉದ್ಯೋಗಿ. ಈಕೆ ಕೇರಳದ ಕೋಯಿಕ್ಕೋಡ್​ ಜಿಲ್ಲೆಯ ನಾಡಪುರಂ ನಿವಾಸಿ. ಕೊಡಗಿನಲ್ಲಿರುವ ಅತಿ ಎತ್ತರದ ತಡಿಯಾಂಡಮೋಲ್‌ ಶಿಖರಕ್ಕೆ ಚಾರಣಕ್ಕೆಂದು ಏಪ್ರಿಲ್​ 2ರಂದು ತೆರಳಿದ್ದಳು. ಶಿಖರದ ತುತ್ತ ತುದಿಯನ್ನು ಏರಿ, ವಾಪಸ್​ ಕೆಳಗೆ ಇಳಿಯುವಾಗ ಚಾರಣಕ್ಕೆ ಬಂದಿದ್ದ ಗುಂಪಿನಿಂದ ಬೇರ್ಪಟ್ಟು, ದಾರಿತಪ್ಪಿದ್ದಳು. ಮರಳಿ ತನ್ನ ದಾರಿಯನ್ನು ಕಂಡುಕೊಂಡು ತನ್ನ ಚಾರಣ ಗುಂಪನ್ನು ಸೇರಲು ಸಾಕಷ್ಟು ಪ್ರಯತ್ನ ಮಾಡಿದಳು. ಆದರೆ, ಆ ಪ್ರಯತ್ನ ವಿಫಲವಾಯಿತು. ಅಂತಿಮವಾಗಿ ಕಾಡಿನಲ್ಲಿ ದಾರಿತಪ್ಪಿದ ಶರಣ್ಯ ಸುಮಾರು ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಸಿಲುಕಿದಳು.

ಆ ನಾಲ್ಕು ದಿನ ಕೇವಲ ಒಂದು ನೀರಿನ ಬಾಟಲಿನ ಸಹಾಯದಿಂದ ಬದುಕುಳಿದಳು. ಸಹಾಯಕ್ಕಾಗಿ ಸಂಪರ್ಕಿಸೋಣ ಅಂದರೆ ಮೊಬೈಲ್​ ಬ್ಯಾಟರಿ ಕೂಡ ಡೆಡ್​ ಆಗಿತ್ತು. ವಿಧಿ ಇಲ್ಲದೇ ರಕ್ಷಣೆ ಮಾಡುತ್ತಾರೆ ಅನ್ನೋ ಭರವಸೆಯಲ್ಲೇ ಆಕೆ ಕಾಡಿನಲ್ಲೇ ಕಾಲ ಕಳೆದಳು. ಸುಮಾರು ನಾಲ್ಕು ದಿನಗಳ ಬಳಿಕ ಆಕೆ ಪತ್ತೆಯಾದಳು. ಇದಿಷ್ಟು ಆಕೆ ಹೇಳಿರುವ ಮಾತುಗಳು.
ಬಿಜೆಪಿ ನಾಯಕರ ಅನುಮಾನ.

ಭಾರತೀಯ ಜನತಾ ಪಕ್ಷದ ಕೊಡಗು ಜಿಲ್ಲೆಯ ಗ್ರಾಮೀಣ ಘಟಕವು ಮಂಗಳವಾರ ( ಏಪ್ರಿಲ್ 7 ) ನಾಪೋಕ್ಲು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಚಾರಣಕ್ಕೆ ಬಂದಿದ್ದ ಶರಣ್ಯ ಕಾಣೆಯಾದ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಶರಣ್ಯ ನಾಪತ್ತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿವೆ ಎಂದು ದೂರಿನಲ್ಲಿ ಬಿಜೆಪಿ ಪಕ್ಷವು ತಿಳಿಸಿದೆ. ಯಾವುದೇ ರಾಜಕೀಯ ಒತ್ತಡವಿಲ್ಲದೆ ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪೊಲೀಸರನ್ನು ಒತ್ತಾಯಿಸಲಾಗಿದೆ. ಕೇರಳ ಟೆಕ್ಕಿ, ನಾಪತ್ತೆಯ ನಾಟಕವಾಡಿ ನಮ್ಮ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ. ಈ ಪ್ರಕರಣದಲ್ಲಿ ಸಾರ್ವಜನಿಕರಿಗೆ ಸ್ಪಷ್ಟತೆ ಮತ್ತು ಪಾರದರ್ಶಕ ಮಾಹಿತಿ ಪಡೆಯುವ ಹಕ್ಕಿದೆ. ಹೀಗಾಗಿ, ಪೊಲೀಸರು ಈ ವಿಷಯವನ್ನು ಪರಿಶೀಲಿಸಿ ಸ್ಪಷ್ಟ ವಿವರಣೆಯನ್ನು ನೀಡಬೇಕೆಂದು ಬಿಜೆಪಿ ನಾಯಕರು ವಿನಂತಿಸಿದ್ದಾರೆ.
ತನಿಖೆ ನಡೆಸುತ್ತೇವೆ

ಇನ್ನು ಪೊಲೀಸರು ಸದ್ಯಕ್ಕೆ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಲ್ಲ ಆದರೆ, ಈ ಪ್ರಕರಣವನ್ನು ಅರ್ಜಿಯಾಗಿ ತನಿಖೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆಯ ನಂತರ ನಾವು ಆಕೆಯನ್ನು ನೋಡಿದಾಗ ಮತ್ತು ಆಕೆಯೊಂದಿಗೆ ಮಾತನಾಡಿದಾಗ ಆಕೆ ಹೇಳಿದ ಮಾತುಗಳನ್ನು ಅನುಮಾನಿಸಲು ನಮಗೆ ಯಾವುದೇ ಕಾರಣವಿರಲಿಲ್ಲ. ಆದಾಗ್ಯೂ, ಈಗ ಕೆಲವು ಅನುಮಾನಗಳು ಎದ್ದಿರುವುದರಿಂದ, ನಾವು ಆ ಆಯಾಮವನ್ನೂ ಪರಿಶೀಲಿಸುತ್ತೇವೆ. ಘಟನೆಗಳ ಅನುಕ್ರಮ ಮತ್ತು ಅವಳ ಹೇಳಿಕೆಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸುತ್ತೇವೆ ಎಂದು ರಕ್ಷಣಾ ತಂಡದ ಭಾಗವಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶರಣ್ಯ ಹೇಳಿದ್ದೇನು?

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಶರಣ್ಯ, ಬೆಳಗ್ಗೆ 8 ಗಂಟೆಗೆ ಚಾರಣ ಆರಂಭಿಸಿ 10.40ರ ಹೊತ್ತಿಗೆ ಶಿಖರವನ್ನು ತಲುಪಿದೆ. ನಮ್ಮದು 12 ಜನರ ಗುಂಪಿತ್ತು. ಶಿಖರದಿಂದ ಕೆಳಗೆ ಇಳಿಯುವಾಗ ನಾನು ದಾರಿ ತಪ್ಪಿದೆ. ನಾನು ಇಬ್ಬರು ಚಾರಣಿಗರೊಂದಿಗೆ ಮುಂದೆ ಸಾಗುತ್ತಿದ್ದೆ ಆದರೆ, ನಾನು ಸ್ವಲ್ಪ ವೇಗವಾಗಿ ಚಲಿಸುತ್ತಿದ್ದೆ. ಇದರ ಪರಿಣಾಮವಾಗಿ, ನಾನು ಅವರಿಂದ ಬೇರ್ಪಟ್ಟೆ. ನಾನು ಹಿಂತಿರುಗಿ ನೋಡಿದಾಗ, ಅವರು ಬಂಡೆಯ ಮೇಲೆ ಕುಳಿತಿರುವುದನ್ನು ನೋಡಿದೆ. ಆದ್ದರಿಂದ, ನಾನು ಅವರಿಗಾಗಿ ಕಾಯಲು ನಿರ್ಧರಿಸಿದೆ. ಇದಾದ ಕೆಲವೇ ಕ್ಷಣಗಳಲ್ಲಿ ನಾನು ಮತ್ತೆ ಹಿಂತಿರುಗಿ ನೋಡಿದಾಗ, ಅವರು ಎಲ್ಲಿಯೂ ಕಾಣಿಸಲಿಲ್ಲ. ನಾನು ಇತರ ಚಾರಣಿಗರ ಜತೆ ಸೇರಲು ಅವರನ್ನೂ ಹುಡುಕಾಡಿದೆ. ಆದರೆ, ಯಾರೂ ಸಿಗಲಿಲ್ಲ. ಟ್ರೆಕ್ಕಿಂಗ್​ ಮುಗಿಯುವ ಹೊತ್ತಿನಲ್ಲಿ ಚೆಕ್​​ಪೋಸ್ಟ್​ನಲ್ಲಿ ನಮಗಾಗಿ ಕಾಯುತ್ತಿದ್ದ ಹೋಂಸ್ಟೇ ಮಾಲೀಕರು ನನಗೆ ಕರೆ ಮಾಡಿದರು.

ನಾನು ದಾರಿ ತಪ್ಪಿದ್ದೇನೆ ಎಂದು ಅವರಿಗೆ ಹೇಳಿದೆ ಮತ್ತು ಅಧಿಕಾರಿಗಳಿಗೆ ತಿಳಿಸಲು ಹೇಳಿದೆ ಎಂದು ಶರಣ್ಯ ಹೇಳಿದ್ದಾರೆ. ನಾಲ್ಕು ದಿನಗಳ ಬಳಿಕ ರಕ್ಷಣೆಇನ್ನು ಶರಣ್ಯ ಅವರು ಸಹಾಯ ಕೋರಿ ತಮ್ಮ ಸ್ನೇಹಿತರಿಗೆ ಮೆಸೇಜ್​ ಕಳುಹಿಸಲು ಪ್ರಯತ್ನಿಸಿದರು. ಆದರೆ, ಮೆಸೇಜ್​ ಸೆಂಡ್​ ಬಟನ್ ಒತ್ತುವ ಮೊದಲೇ ಅವರ ಫೋನ್ ಸ್ವಿಚ್​ ಆಫ್​ ಆಯಿತು. ಇದಾದ ಬಳಿಕ ಹೇಗಾದರೂ ಅಪಾಯದಿಂದ ತಪ್ಪಿಸಿಕೊಳ್ಳುವ ಬಯಕೆಯೊಂದಿಗೆ ಕಿರಿದಾದ ಹೊಳೆಯ ಬಳಿಯಿದ್ದ ದೊಡ್ಡ ಬಂಡೆಯ ಮೇಲೆ ಕುಳಿತರು. ತನ್ನ ಜೊತೆ ತೆಗೆದುಕೊಂಡು ಹೋಗಿದ್ದ 500 ಮಿಲಿ ನೀರಿನ ಬಾಟಲಿಯಲ್ಲಿ ನೀರು ತುಂಬಿಸಿಕೊಂಡರು. ಸುಲಭವಾದ ಪ್ರಯಾಣ ಅಂತಾ ಭಾವಿಸಿದ್ದರಿಂದ ನಾನು ಆಹಾರವನ್ನು ಕೊಂಡೊಯ್ಯಲಿಲ್ಲ. ನಾನು ಪ್ರತಿದಿನ ಮೂರು ಲೀಟರ್ ನೀರು ಕುಡಿದು ಬದುಕುಳಿದೆ ಎಂದು ಶರಣ್ಯ ಹೇಳಿದ್ದಾರೆ. ಆನೆಗಳಂತಹ ಕಾಡು ಪ್ರಾಣಿಗಳು ಆಗಾಗ್ಗೆ ಕಂಡುಬರುವ ಕಾಡಿನಲ್ಲಿ ಸಿಲುಕಿಕೊಂಡ ಶರಣ್ಯ, ತುಂಬಾ ಧೈರ್ಯದಿಂದ ನಾಲ್ಕು ದಿನಗಳನ್ನು ಕಳೆದಳು. ಏಪ್ರಿಲ್ 5 ರಂದು, ಸಾಮಾನ್ಯವಾಗಿ ಯಾರೂ ಹೋಗದ ಕಾಡಿನ ದೂರದ ಪ್ರದೇಶದಲ್ಲಿ ಸ್ಥಳೀಯರ ಗುಂಪೊಂದು ಆಕೆಯನ್ನು ನೋಡಿತು ಎಂದು ರಕ್ಷಣಾ ತಂಡದ ಸದಸ್ಯರು ತಿಳಿಸಿದ್ದಾರೆ.

ನೆಟ್ಟಿಗರ ಆರೋಪವೇನು?

ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅನೇಕರು ಇದನ್ನು ನಂಬಲು ಸಾಧ್ಯವಿಲ್ಲದ ಕಟ್ಟುಕಥೆ ಎಂದು ಟೀಕಿಸುತ್ತಿದ್ದಾರೆ. ಕಾಡಿನಲ್ಲಿ ಕಾಡು ಪ್ರಾಣಿಗಳ ಮಧ್ಯೆ ಆಹಾರ ಮತ್ತು ನೀರಿಲ್ಲದೆ ನಾಲ್ಕು ದಿನಗಳ ಕಾಲ ಬದುಕುಳಿದರೂ ಸಹ ಆಕೆ ಇಷ್ಟೊಂದು ಚಟುವಟಿಕೆಯಿಂದ ಇರಲು ಹೇಗೆ ಸಾಧ್ಯ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಇದೊಂದು “ಫೇಕ್ ಪಬ್ಲಿಸಿಟಿ” ಇರಬಹುದು ಅಥವಾ ಜನರ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುವ ಹುನ್ನಾರವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ನೆಟ್ಟಿಗರು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಆಕೆಯ ಮೇಲೆ ಭಾರಿ ದಂಡ ವಿಧಿಸಿ ಮತ್ತು ಏನಾದರೂ ನಿಯಮವಿದ್ದರೆ ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಆಕೆಯನ್ನು ಜೈಲಿಗೆ ಹಾಕಿ ಎಂದಿದ್ದಾರೆ.

LEAVE A REPLY

Please enter your comment!
Please enter your name here