
ಸರಕಾರಿ ಪ್ರೌಢಶಾಲೆ ಪೆರಡಾಲ ಶಾಲಾ ಶತಮಾನೋತ್ಸವ ಸಮಿತಿ ಕಛೇರಿ ಉದ್ಘಾಟನೆ; ಸಾರ್ವಜನಿಕರ ಗಮನಾರ್ಹ ಭಾಗವಹಿಸುವಿಕೆ
ಬದಿಯಡ್ಕ : ಪೆರಡಾಲ ಸರಕಾರಿ ಪ್ರೌಢಶಾಲೆಯ (GHS Perdala) ಶತಮಾನೋತ್ಸವ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇದರ ಅಂಗವಾಗಿ ರೂಪಿಕರಿಸಿದ ಶತಮಾನೋತ್ಸವ ಆಚರಣಾ ಸಮಿತಿಯ ಕಛೇರಿಯನ್ನು ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಶಂಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶತಮಾನೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಮಾಹಿನ್ ಕೇಳೋಟ್ ಸ್ವಾಗತಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯತ್ ಸದಸ್ಯ ಖಾದರ್ ಮಾನ್ಯ, ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ (AEO) ಅಶೋಕ್ ಎಂ., ಜಿ.ಎಚ್.ಎಸ್. ಪೆರಡಾಲದ ಮುಖ್ಯೋಪಾಧ್ಯಾಯಿನಿ ಸೌರಭಾ ಹಾಗೂ ಅಶ್ರಫ್ ಪಳ್ಳಿಕಂಡಂ ಮಾತನಾಡಿದರು. ಕಾರ್ಯ ಸಂಚಾಲಕ ಖಾಲಿದ್ ಬಪ್ಪಲಿಪ್ಪೋಣಂ ವಂದಿಸಿದರು.
ಬದಿಯಡ್ಕ ಮೇಲಿನ ಪೇಟೆಯ ತುಳು ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ನಾಗರಿಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಸಾರ್ವಜನಿಕರ ಗಮನಾರ್ಹ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಶಾಲೆಯ ಶತಮಾನೋತ್ಸವ ಆಚರಣೆಗೆ ಈ ಸಮಾರಂಭವು ಅರ್ಥಪೂರ್ಣ ಹಾಗೂ ಉತ್ಸಾಹಭರಿತ ಮುನ್ನುಡಿಯಾಯಿತು.
ಶಾಲೆಯ ನೂರು ವರ್ಷಗಳ ಶೈಕ್ಷಣಿಕ ಇತಿಹಾಸ, ಸಾಧನೆಗಳು ಹಾಗೂ ಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕುವುದರ ಜೊತೆಗೆ, ಈ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶತಮಾನೋತ್ಸವದ ಅಂಗವಾಗಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಿತಿ ಯೋಜನೆ ರೂಪಿಸುತ್ತಿದೆ.
