ಪಿ.ಎಂ. ಸೂರ್ಯ ಘರ್ ಯೋಜನೆ ಸೇವಾಸೇತು ಅಭಿಯಾನಕ್ಕೆ ಚಾಲನೆ

0
8

ಗೋಣಿಕೊಪ್ಪ : ಕೇಂದ್ರ ಸರ್ಕಾರದ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ ಯೋಜನೆಯ ಪ್ರಯೋಜನಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಗೋಣಿಕೊಪ್ಪ ಸೆಸ್ಕ್ ಉಪವಿಭಾಗದ ಕಚೇರಿಯಲ್ಲಿ ಸೇವಾ ಸೇತು ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಸಂಜನಾ ಅಭಿಯಾನವನ್ನು ಉದ್ಘಾಟಿಸಿದರು. ಅಭಿಯಾನದಲ್ಲಿ ಸುಮಾರು ಎಂಟು ಅಧಿಕೃತ ಸೌರ ಮೇಲ್ಚಾವಣಿ ವಿದ್ಯುತ್ ಘಟಕಗಳ ಮಾರಾಟಗಾರರು ಭಾಗವಹಿಸಿ, ಸೌರ ವಿದ್ಯುತ್ ಅಳವಡಿಕೆಯ ಪ್ರಯೋಜನಗಳು, ಸರ್ಕಾರದ ಸಹಾಯಧನ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸೌರಶಕ್ತಿಯ ಪಾತ್ರದ ಕುರಿತು ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಪ್ರತಿನಿಧಿಗಳು ಯೋಜನೆಯಡಿ ಲಭ್ಯವಿರುವ ಬ್ಯಾಂಕ್ ಸಾಲ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಸುಮಾರು 50ರಿಂದ 60 ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡರು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮನೆಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವುದು ಹಾಗೂ ಯೋಜನೆಯ ಪ್ರಯೋಜನಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವುದು ಅಭಿಯಾನದ ಉದ್ದೇಶವಾಗಿದೆ.

ಸೇವಾ ಸೇತು ಅಭಿಯಾನವು ಅ.13ರಿಂದ 15ರವರೆಗೆ ಗೋಣಿಕೊಪ್ಪ ಸೆಸ್ಕ್ ಉಪವಿಭಾಗದ ಕಚೇರಿಯಲ್ಲಿ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಸಾರ್ವಜನಿಕರು ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.

ಕಾಫಿ ಬೆಳೆಗಾರರಿಗೆ ವಿದ್ಯುತ್ ದರ ವಿನಾಯಿತಿ:
ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ LT-4(C) ವಿದ್ಯುತ್ ದರ ವರ್ಗದಡಿ ಸರ್ಕಾರದಿಂದ ದೊರೆಯುವ ಸೌಲಭ್ಯದ ಕುರಿತು ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್ ಎಸ್.ಎಸ್. ಮಾಹಿತಿ ನೀಡಿದರು.
ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ವರ್ಷದಲ್ಲಿ ಗರಿಷ್ಠ ಆರು ತಿಂಗಳವರೆಗೆ ನಿಗದಿತ ಸ್ಥಿರ ಶುಲ್ಕದಲ್ಲಿ ಶೇ.75ರಷ್ಟು ವಿನಾಯಿತಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ಈ ಸೌಲಭ್ಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಗೋಣಿಕೊಪ್ಪ ಸೆಸ್ಕ್ ಉಪವಿಭಾಗದ ಕಚೇರಿಯನ್ನು ಸಂಪರ್ಕಿಸುವಂತೆ ಕಾಫಿ ಬೆಳೆಗಾರರಿಗೆ ಮನವಿ ಮಾಡಿದರು.

ವರದಿ: ಪ್ರಿತುನ್ ಪೂವಣ್ಣ