ಆಸ್ತಿ ಕಬಳಿಕೆ ಯತ್ನಕ್ಕೆ ಕಾನೂನು ಕ್ರಮ : ಮಹಿಳೆಗೆ ಜೈಲು ಶಿಕ್ಷೆ

0
13

ಪುತ್ತೂರು : ನಕಲಿ ದಾಖಲೆಗಳನ್ನು ಸೃಷ್ಟಿಸಿ 4.71 ಎಕರೆ ಆಸ್ತಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಕಬಳಿಸಲು ಯತ್ನಿಸಿದ ಪ್ರಕರಣದಲ್ಲಿ ಮಹಿಳಾ ಆರೋಪಿಗೆ ಪುತ್ತೂರಿನ ಎಎಸ್‌ಸಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಎರಡನೇ ಆರೋಪಿಯಾಗಿದ್ದ ಮಹಾಲಕ್ಷ್ಮಿ ಶಿಕ್ಷೆಗೆ ಒಳಗಾದ ಮಹಿಳೆ. ಪ್ರಕರಣದ ಮೊದಲನೇ ಆರೋಪಿಯಾಗಿದ್ದ ರುಕ್ಷ್ಮಯ್ಯ ಗೌಡ ಹಾಗೂ ಮೂರನೇ ಆರೋಪಿಯಾಗಿದ್ದ ಶಿವರಾಮ ಗೌಡ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ವಿರುದ್ಧದ ವಿಚಾರಣೆ ಮುಂದುವರಿದು ಶಿಕ್ಷೆ ವಿಧಿಸಲಾಗಿದೆ.

4.71 ಎಕರೆ ಆಸ್ತಿ ಕಬಳಿಸಲು ಸಂಚು

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿದ್ದ ಒಟ್ಟು 4.71 ಎಕರೆ ಆಸ್ತಿ ಬೆಂಗಳೂರಿನಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಆಗಿದ್ದ ಶೇಷಪ್ಪ ಗೌಡ ಅವರಿಗೆ ಸೇರಿದ್ದಾಗಿತ್ತು. ಈ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಆರೋಪಿಗಳು ಪರಸ್ಪರ ಪಿತೂರಿ ನಡೆಸಿ ಪುತ್ತೂರು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಮಹಾಲಕ್ಷ್ಮಿ ಅವರು ‘ಮಾನಕ್ಕ’ ಎಂಬಂತೆ ಹಾಗೂ ಶಿವರಾಮ ಗೌಡ ಅವರು ‘ಶೇಷಪ್ಪ ಗೌಡ’ ಎಂಬಂತೆ ನಟಿಸಿ, ಖೋಟಾ ಸಹಿ ಮತ್ತು ನಕಲಿ ದಾಖಲೆಗಳ ಮೂಲಕ ಆಸ್ತಿಯನ್ನು ರುಕ್ಷ್ಮಯ್ಯ ಗೌಡ ಅವರ ಹೆಸರಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಕುರಿತು ಶೇಷಪ್ಪ ಗೌಡ ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ಪ್ರಕರಣ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ (IPC) ಕಲಂ 416, 417, 419, 464, 468, 420 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆಗಿನ ಪೊಲೀಸ್ ಉಪನಿರೀಕ್ಷಕ ಆನಂದ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮಹಿಳಾ ಆರೋಪಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ದೇವರಾಜ್ ವೈ.ಎಚ್. ಅವರು ಮಹಾಲಕ್ಷ್ಮಿ ಅವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ. ಐಪಿಸಿ ಕಲಂ 419ರ ಅಡಿಯಲ್ಲಿ ಎರಡು ವರ್ಷಗಳ ಸರಳ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಲಾಗಿದೆ. ಐಪಿಸಿ ಕಲಂ 468ರ ಅಡಿಯಲ್ಲಿ ಮೂರು ವರ್ಷಗಳ ಸರಳ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ವಾದ ಮಂಡಿಸಿದ್ದರು.