ನವದೆಹಲಿ : ಐಷಾರಾಮಿ ವಾಹನ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಲೆಕ್ಸಸ್ ಇಂಡಿಯಾ ಹರಿಯಾಣದ ಗುರುಗ್ರಾಮ್ನಲ್ಲಿ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ (GEC) ಆರಂಭಿಸಿದೆ. ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸುವ ಉದ್ದೇಶದಿಂದ ಕಂಪನಿಯು ತನ್ನ ಸೇವಾ ಜಾಲವನ್ನು ವಿಸ್ತರಿಸುತ್ತಿದೆ.
ಲೆಕ್ಸಸ್ ಭಾರತ್ ಎಂಬ ವ್ಯಾಪಾರದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಟೊಯೋಟಾ ತ್ಸುಶೋ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಈ ನೂತನ ಕೇಂದ್ರವನ್ನು ಸ್ಥಾಪಿಸಿದೆ. ಕಿರ್ಲೋಸ್ಕರ್ ಸಿಸ್ಟಮ್ಸ್, ಟೊಯೋಟಾ ತ್ಸುಶೋ ಇಂಡಿಯಾ ಮತ್ತು ಜಪಾನ್ನ ಟೊಯೋಟಾ ತ್ಸುಶೋ ಕಾರ್ಪೊರೇಷನ್ ನಡುವಿನ ಜಂಟಿ ಉದ್ಯಮ ಇದಾಗಿದೆ.
ನೂತನ ಕೇಂದ್ರವನ್ನು ಲೆಕ್ಸಸ್ ಭಾರತ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಚಿವಿಕುಲ ಹಾಗೂ ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಹಿಕಾರು ಇಕೆಯುಚಿ ಅವರು ಡೀಲರ್ ಪಾಲುದಾರರು ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಅಹಮದಾಬಾದ್, ಸೂರತ್ ಮತ್ತು ಪುಣೆಯಲ್ಲಿ ಇತ್ತೀಚೆಗೆ ಆರಂಭಿಸಲಾದ ಕೇಂದ್ರಗಳ ಬಳಿಕ ಗುರುಗ್ರಾಮ್ನ ಈ ನೂತನ ಕೇಂದ್ರವು ಕಂಪನಿಯ ವಿಸ್ತರಣಾ ಯೋಜನೆಯ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. ಪ್ರಸ್ತುತ ಮುಂಬೈ, ನವದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಚಂಡೀಗಢ, ಕೊಚ್ಚಿ, ಅಹಮದಾಬಾದ್, ಸೂರತ್, ಪುಣೆ ಹಾಗೂ ಗುರುಗ್ರಾಮ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಲೆಕ್ಸಸ್ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ಗಳನ್ನು ಹೊಂದಿದೆ.
ಲೆಕ್ಸಸ್ನ ವಿಶಿಷ್ಟ ‘ಯೆಟ್’ ವಿನ್ಯಾಸ ತತ್ವದ ಆಧಾರದಲ್ಲಿ ರೂಪುಗೊಂಡಿರುವ ಈ ಕೇಂದ್ರವು ಆಧುನಿಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಪಾನಿನ ಸಾಂಪ್ರದಾಯಿಕ ‘ಒಮೊಟೆನಾಶಿ’ ಆತಿಥ್ಯ ಪರಿಕಲ್ಪನೆಯನ್ನು ಒಳಗೊಂಡಿದೆ. ಭಾರತೀಯ ಸಂಪ್ರದಾಯದ ‘ಅತಿಥಿ ದೇವೋ ಭವ’ ಪರಿಕಲ್ಪನೆಯೊಂದಿಗೆ ಗ್ರಾಹಕರಿಗೆ ವೈಯಕ್ತಿಕ ಕಾಳಜಿ ಮತ್ತು ವಿಶೇಷ ಆತಿಥ್ಯ ಒದಗಿಸುವುದು ಇದರ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಹಿಕಾರು ಇಕೆಯುಚಿ, ಭಾರತದ ಐಷಾರಾಮಿ ವಾಹನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರಿಗೆ ವಿಶಿಷ್ಟ ಉತ್ಪನ್ನಗಳು ಮತ್ತು ಉತ್ತಮ ಅನುಭವಗಳನ್ನು ಒದಗಿಸುವುದು ಕಂಪನಿಯ ಆದ್ಯತೆಯಾಗಿದೆ. ಗುರುಗ್ರಾಮ್ ಕೇಂದ್ರದ ಆರಂಭವು ಉತ್ತರ ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದರು.
ಲೆಕ್ಸಸ್ ಭಾರತ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಚಿವಿಕುಲ ಮಾತನಾಡಿ, ಭಾರತದಲ್ಲಿ ಲೆಕ್ಸಸ್ನ ಹೊಸ ಅಧ್ಯಾಯಕ್ಕೆ ಗುರುಗ್ರಾಮ್ ಕೇಂದ್ರ ನಾಂದಿಯಾಗಿದೆ. ವಿಶ್ವದರ್ಜೆಯ ಐಷಾರಾಮಿ ವಾಹನ ಮಾರಾಟ ಮತ್ತು ವೈಯಕ್ತಿಕ ಗ್ರಾಹಕ ಸೇವೆ ಒದಗಿಸುವುದು ಕಂಪನಿಯ ಬದ್ಧತೆಯಾಗಿದೆ ಎಂದರು.
ಈ ಕೇಂದ್ರಕ್ಕೆ ಭೇಟಿ ನೀಡುವ ಗ್ರಾಹಕರು ಲೆಕ್ಸಸ್ನ ವಿವಿಧ ಐಷಾರಾಮಿ ವಾಹನ ಮಾದರಿಗಳು, ಸುಧಾರಿತ ತಂತ್ರಜ್ಞಾನ, ಕರಕುಶಲ ವಿನ್ಯಾಸ ಹಾಗೂ ಎಲೆಕ್ಟ್ರಿಫೈಡ್ ಮೊಬಿಲಿಟಿ ಸೌಲಭ್ಯಗಳನ್ನು ನೇರವಾಗಿ ವೀಕ್ಷಿಸಿ ಅನುಭವಿಸಬಹುದು. ಅಲ್ಲದೆ, ಗುರುಗ್ರಾಮ್ನಲ್ಲಿರುವ ಲೆಕ್ಸಸ್ ಸರ್ವಿಸ್ ಪಾಯಿಂಟ್ ಮೂಲಕ ವಾಹನಗಳ ನಿರ್ವಹಣೆ ಮತ್ತು ಸೇವೆಗಳನ್ನು ಪಡೆಯಬಹುದು.
ಗ್ರಾಹಕರ ಅನುಕೂಲಕ್ಕಾಗಿ ಲೆಕ್ಸಸ್ ಇಂಡಿಯಾ ದೇಶಾದ್ಯಂತ 20 ಲೆಕ್ಸಸ್ ಸರ್ವಿಸ್ ಪಾಯಿಂಟ್ಗಳನ್ನು ನಿರ್ವಹಿಸುತ್ತಿದೆ. ಇದರೊಂದಿಗೆ ಐದು ವರ್ಷಗಳ ರೋಡ್ಸೈಡ್ ಅಸಿಸ್ಟೆನ್ಸ್, ಟೋಯಿಂಗ್, ಟ್ಯಾಕ್ಸಿ ಸೇವೆ, ವಾಹನ ಮರುತಲುಪಿಸುವ ಸೌಲಭ್ಯ ಹಾಗೂ ಎಂಟು ವರ್ಷ ಅಥವಾ 2 ಲಕ್ಷ ಕಿ.ಮೀ.ವರೆಗಿನ ವಾಹನ ಮತ್ತು ಹೈಬ್ರಿಡ್ ಬ್ಯಾಟರಿ ವಾರಂಟಿ ಸೌಲಭ್ಯಗಳನ್ನು ಒದಗಿಸುತ್ತಿದೆ.
ಇದಲ್ಲದೆ, ಆಯ್ದ ಮಾದರಿಗಳಿಗೆ ಅಶ್ಯೂರ್ಡ್ ಬೈ ಬ್ಯಾಕ್ ಯೋಜನೆ ಹಾಗೂ ಲೆಕ್ಸಸ್ ಲಕ್ಸುರಿ ಕೇರ್ ಸೇವಾ ಪ್ಯಾಕೇಜ್ಗಳ ಮೂಲಕ ಗ್ರಾಹಕರ ವಾಹನ ಮಾಲೀಕತ್ವದ ಅನುಭವವನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಕಂಪನಿ ಮುಂದಾಗಿದೆ.

