ಸ್ವಾತಂತ್ರ್ಯ ಹೋರಾಟಗಾರರ ಬದುಕು ಮಕ್ಕಳಿಗೆ ಪ್ರೇರಣೆ: ಪಿಎಸ್‌ಐ ಯಶೋಧಾ ಕಟಕೆ

0
8

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ ಬದುಕು ಮತ್ತು ಸಾಧನೆಗಳು ಮಕ್ಕಳಿಗೆ ಪ್ರೇರಣೆಯಾಗುತ್ತವೆ. ಅವರು ರಚಿಸಿದ ಕೃತಿಗಳು ದೇಶಪ್ರೇಮ, ಪ್ರೀತಿ, ಸೌಹಾರ್ದ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ ಎಂದು ನಗರದ ರಾಘವೇಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಯಶೋಧಾ ಕಟಕೆ ಅಭಿಪ್ರಾಯಪಟ್ಟರು.

ಕಲಬುರಗಿಯ ಸೈಯದ್ ಚಿಂಚೋಳಿಯ ಚಂದ್ರಶೇಖರ್ ಪಾಟೀಲ್ ರೇವೂರ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಅಕ್ಟೋಬರ್ 24ರಂದು ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿವಂಗತ ಮಹಾದೇವಪ್ಪ ಕಡೇಚೂರ್ ಅವರು ಮಕ್ಕಳಿಗಾಗಿ ಬರೆದ ‘ಅಯ್ಯನ ಕಥೆಗಳು’ ಕೃತಿಯನ್ನು ಶಾಲೆಗಳಿಗೆ ಹಸ್ತಾಂತರಿಸುವ ಅಭಿಯಾನದ ನಾಲ್ಕನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ನಾಡಿನ ಸಂಪತ್ತಾಗಿದ್ದು, ರಾಷ್ಟ್ರಭಕ್ತಿಯುಳ್ಳ ಉತ್ತಮ ಪ್ರಜೆಗಳ ನಿರ್ಮಾಣಕ್ಕೆ ಒಳ್ಳೆಯ ಪುಸ್ತಕಗಳ ಓದು ಅಗತ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು, ತಂದೆ-ತಾಯಿ ಹಾಗೂ ರೈತರು ಮಕ್ಕಳಿಗೆ ಆದರ್ಶ ವ್ಯಕ್ತಿಗಳಾಗಬೇಕು. ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಾಡಲು ಸೈನಿಕರ ತ್ಯಾಗ ಮತ್ತು ಬಲಿದಾನ ಕಾರಣವಾಗಿದೆ. ಮಕ್ಕಳು ಸ್ವತಂತ್ರವಾಗಿ ಬದುಕಲು ಪೋಷಕರ ಕೊಡುಗೆ ಅಪಾರವಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಹಾಗೂ ಅವರು ರಚಿಸಿದ ಕೃತಿಗಳು ಮಕ್ಕಳ ಸಾಧನೆಗೆ ಸ್ಫೂರ್ತಿ ನೀಡುತ್ತವೆ ಎಂದರು.

ಪುಸ್ತಕ ಜ್ಞಾನ ವಿಸ್ತರಣೆಗೆ ಮೂಲ: ಸಂಧ್ಯಾ ಹೊನಗುಂಟಿಕರ್

ಖ್ಯಾತ ಕಥೆಗಾರ್ತಿ ಹಾಗೂ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪುಸ್ತಕ ಓದುವುದರಿಂದ ಮನಸ್ಸಿಗೆ ಮುದ ದೊರೆಯುವುದರೊಂದಿಗೆ ಜ್ಞಾನ ಮತ್ತು ತಿಳುವಳಿಕೆ ಹೆಚ್ಚುತ್ತದೆ ಎಂದರು. ಅಜ್ಜ-ಅಜ್ಜಿಯರಿಂದ ಕಥೆಗಳನ್ನು ಕೇಳುವುದು ಹಾಗೂ ಪುಸ್ತಕಗಳನ್ನು ಓದುವುದು ಮಕ್ಕಳ ಕಲ್ಪನಾಶಕ್ತಿಯನ್ನು ವಿಸ್ತರಿಸಿ ಸಾಧನೆಗೆ ಪ್ರೇರಣೆ ನೀಡುತ್ತದೆ. ಪುಸ್ತಕಗಳ ಬಗ್ಗೆ ಪ್ರೀತಿ ಮತ್ತು ಗೌರವ ಬೆಳೆಸಿಕೊಂಡಾಗ ವ್ಯಕ್ತಿತ್ವ ವಿಕಸನಕ್ಕೂ ಅವಕಾಶ ಸಿಗುತ್ತದೆ ಎಂದು ಹೇಳಿದರು.

‘ಅಯ್ಯನ ಕಥೆಗಳು’ ಕೃತಿಯಲ್ಲಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಹಾಸ್ಯ, ಪರಿಸರ, ಪ್ರಾಣಿ, ದೆವ್ವ ಹಾಗೂ ನೀತಿಬೋಧಕ ಕಥೆಗಳ ಗುಚ್ಛವಿದೆ. ಮಕ್ಕಳು ಈ ಕಥೆಗಳನ್ನು ಓದುವ ಮೂಲಕ ಜ್ಞಾನವಂತರಾಗಬೇಕು ಎಂದು ಅವರು ಕರೆ ನೀಡಿದರು.

ಶಾಲೆಯ ಅಧ್ಯಕ್ಷೆ ಸುನಿತಾ ಅನಿಲ್ ಕುಮಾರ್ ಡಾಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಅನಿಲ್ ಕುಮಾರ್ ಡಾಂಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಕೃತಿಗಳನ್ನು ಮಕ್ಕಳ ಕೈಗೆ ತಲುಪಿಸುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಅಭಿಯಾನದಡಿ ನಗರದ ಶಾಲೆಗಳಿಗಿಂತ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕೃತಿಗಳನ್ನು ಹಸ್ತಾಂತರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಈ ವರ್ಷ ಹೋಮಿಯೋಪತಿ ವೈದ್ಯಕೀಯ ಸೀಟು ಪಡೆದ ರುಚಿತಾ ಡಾಂಗೆ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಸುನಿತಾ ಪೂಜಾರಿ, ಟ್ರಸ್ಟಿ ಮಹೇಶ್ ಕಡೇಚೂರ್, ಶಿಕ್ಷಕರಾದ ಜಗದೇವಿ, ಉಮಾದೇವಿ, ಪ್ರಿಯಾಂಕಾ, ಚೆನ್ನಮ್ಮ, ಶಿವಲೀಲಾ ಮತ್ತು ಐಶ್ವರ್ಯ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಸುಚೇತ್ ಡಾಂಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಮಕ್ಕಳಲ್ಲಿ ಕಥೆ ಹೇಳುವ ಆಸಕ್ತಿ ಬೆಳೆಸಲು ಸ್ಪರ್ಧೆ

ಮಕ್ಕಳಲ್ಲಿ ಕಥೆ ಹಾಗೂ ಓದಿನ ಬಗ್ಗೆ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿ ಶನಿವಾರ ‘ಅಯ್ಯನ ಕಥೆಗಳು’ ಕೃತಿಯಲ್ಲಿನ ಕಥೆಗಳು ಸೇರಿದಂತೆ ವಿವಿಧ ಪುಸ್ತಕಗಳ ಕಥೆ ಹೇಳುವ ಸ್ಪರ್ಧೆ ಆಯೋಜಿಸಲಾಗುವುದು. ಉತ್ತಮವಾಗಿ ಕಥೆ ಪ್ರಸ್ತುತಪಡಿಸುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಸಂಪ್ರದಾಯ ಆರಂಭಿಸಲಾಗುವುದು ಎಂದು ಶಾಲೆಯ ಆಡಳಿತಾಧಿಕಾರಿ ಸುಚೇತ್ ಡಾಂಗೆ ತಿಳಿಸಿದರು