ಉಡುಪಿ : 432 ದಿನಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯದ ಭರವಸೆ ಸಿಕ್ಕಿದೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಧರಣಿ ಸ್ಥಳಕ್ಕೆ ಆಗಮಿಸಿದ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ, 20 ವಾರ್ಡ್ಗಳ ಪೈಕಿ ಐದು ವಾರ್ಡ್ಗಳನ್ನು ಕೈಬಿಟ್ಟು ನೂತನ ಪಟ್ಟಣ ಪಂಚಾಯತ್ ರಚಿಸುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಭರವಸೆ ಈಡೇರದಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಅವೈಜ್ಞಾನಿಕವಾಗಿ ಗ್ರಾಮೀಣ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಳೆದ 432 ದಿನಗಳಿಂದ ಹೋರಾಟ ನಡೆಯುತ್ತಿತ್ತು. ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿತ್ತು.ರೈತರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ.. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಬೈಂದೂರಿಗೆ ಆಗಮಿಸಿ, ತಾಲೂಕು ಆಡಳಿತ ಸೌಧದ ಎದುರು ಧರಣಿ ನಡೆಸುತ್ತಿದ್ದ ರೈತರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ರೈತರ ಬೇಡಿಕೆ ನ್ಯಾಯಯುತವಾಗಿದೆ ಎಂದು ಒಪ್ಪಿಕೊಂಡ ಸಚಿವರು, ಬೈಂದೂರು ಪಟ್ಟಣ ಪಂಚಾಯತ್ ಅವೈಜ್ಞಾನಿಕವಾಗಿ ರೂಪುಗೊಂಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಭರವಸೆ ನೀಡಿದ್ದಾರೆ.

ರೈತರನ್ನು ಕೇವಲ ಸಮಾಧಾನಪಡಿಸಲು ಈ ಮಾತು ಹೇಳುತ್ತಿಲ್ಲ. ಮುಖ್ಯಮಂತ್ರಿಗಳ ಪರವಾಗಿ ಸರ್ಕಾರದ ಅಧಿಕೃತ ಘೋಷಣೆ ಮಾಡುತ್ತಿದ್ದೇನೆ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದರು. ಆದೇಶ ಹೊರಡಿಸಲು ಒಂದೆರಡು ದಿನಗಳು ಬೇಕಾಗಬಹುದು. ಘೋಷಣೆಯ ಸಂಪೂರ್ಣ ಅನುಷ್ಠಾನಕ್ಕೆ ಒಂದರಿಂದ ಎರಡು ತಿಂಗಳ ಕಾಲಾವಕಾಶದ ಅಗತ್ಯವಿದೆ .ತಾನು ಮಾಡಿರುವ ಘೋಷಣೆಯನ್ನು ಈಡೇರಿಸಲು ಬದ್ಧನಾಗಿದ್ದೇನೆ. ಒಂದು ವೇಳೆ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿ ರೈತರೊಂದಿಗೆ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಹೋರಾಟಗಾರರಲ್ಲಿ ವಿಶ್ವಾಸ ಮೂಡಿಸಿದರು.ಸದ್ಯ ಒಂದು ವರ್ಷಕ್ಕೂ ಅಧಿಕ ಕಾಲ ನಡೆದ ರೈತರ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿದೆ. ಪಕ್ಷಾತೀತವಾಗಿ ರೈತರ ಬೇಡಿಕೆಯನ್ನು ಪರಿಗಣಿಸಿರುವುದು ರೈತರಲ್ಲಿ ಸಮಾಧಾನ ಉಂಟು ಮಾಡಿದೆ.

