ಬ್ರಹ್ಮಾವರ : ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ರಸ್ತೆ ಬದಿಯಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಿನಕೋಟೆಯಲ್ಲಿ ಬುಧವಾರ ಬೆಳಗ್ಗಿನ ಜಾವ ಸುಮಾರು 5.30ಕ್ಕೆ ಸಂಭವಿಸಿದೆ. ಘಟನೆಯಲ್ಲಿ ಕಂಟೈನರ್ನಲ್ಲಿದ್ದ ದೇವೇಂದ್ರ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಜಯನ್ ಎಂಬವರು ಕಂಟೈನರ್ ಲಾರಿಯನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆಯ ಶೆಟ್ಟಿ ಮಲ್ಲಿ ಕಾರ್ ಸರ್ವಿಸ್ ಎದುರು ತಲುಪುತ್ತಿದ್ದಂತೆ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ಮಧ್ಯದ ಡಿವೈಡರ್ ಏರಿ ಎದುರಿನ ರಸ್ತೆಯನ್ನು ದಾಟಿದ ಲಾರಿ, ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಧಾವಿಸಿ ಗ್ಯಾರೇಜ್ ಮುಂಭಾಗದಲ್ಲಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಸ್ಥಳೀಯ ನಿವಾಸಿ ಸುಜನ್ ಕುಮಾರ್ ಅವರಿಗೆ ಸೇರಿದ ಶೆಟ್ಟಿ ಮಲ್ಲಿ ಕಾರ್ ಸರ್ವಿಸ್ಗೆ ಈ ಹಿಂದೆ ಅಪಘಾತಕ್ಕೀಡಾಗಿ ದುರಸ್ತಿಗಾಗಿ ತರಲಾಗಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮೇಲ್ಭಾಗ ಹಾಗೂ ಎಡ ಮತ್ತು ಬಲ ಭಾಗಗಳು ತೀವ್ರವಾಗಿ ಜಖಂಗೊಂಡಿವೆ.
ಈ ಸಂಬಂಧ ಸುಜನ್ ಕುಮಾರ್ ಅವರು ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 193/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 281 ಮತ್ತು 125(a)ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

