ವಿದ್ಯಾಗಿರಿ ಕಡಂದಲೆ ಸರ್ಕಾರಿ ಶಾಲೆಗೆ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಿಂದ ಸುಮಾರು ₹1 ಲಕ್ಷ ಮೌಲ್ಯದ ಶೈಕ್ಷಣಿಕ ಪರಿಕರಗಳ ಕೊಡುಗೆ

0
23

ಮೂಡುಬಿದಿರೆ : ತಾಲೂಕಿನ ಕಡಂದಲೆ ಗ್ರಾಮದ ವಿದ್ಯಾಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರಿನ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವತಿಯಿಂದ ಸುಮಾರು ₹1 ಲಕ್ಷ ಮೌಲ್ಯದ ವಿವಿಧ ಶೈಕ್ಷಣಿಕ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಶಾಲೆಯ ಶಿಕ್ಷಕಿ ಪೌಲಿನ್ ಅವರ ಮನವಿಗೆ ಸ್ಪಂದಿಸಿದ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಸಮಾಜಮುಖಿ ಕಾರ್ಯದ ಭಾಗವಾಗಿ ಶಾಲೆಗೆ ಅಗತ್ಯವಿರುವ ವಿವಿಧ ಪರಿಕರಗಳನ್ನು ಒದಗಿಸಿದರು. ಈ ಕೊಡುಗೆಯಿಂದ ಶಾಲೆಯ ವಿದ್ಯಾರ್ಥಿಗಳ ಕಲಿಕಾ ವಾತಾವರಣ ಇನ್ನಷ್ಟು ಉತ್ತಮವಾಗಲಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ.

ಶಾಲೆಯ ವತಿಯಿಂದ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಈ ಕಾರ್ಯಕ್ಕೆ ಸಹಕರಿಸಿದ ಎಲ್ಲ ದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಇಂತಹ ಸಹಕಾರ ಇತರರಿಗೂ ಮಾದರಿಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶಾಲೆಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.