ಉಡುಪಿ: ಆಚಾರ್ಯ ಮಧ್ವರ ತತ್ವಾದರ್ಶಗಳನ್ನು ಸ್ಮರಿಸಿ, ದ್ವೈತ ಸಿದ್ಧಾಂತದ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಅ.21ರಂದು ಉಡುಪಿಯ ಶ್ರೀಕೃಷ್ಣ ಮಠದ ಗೀತಾ ಮಂದಿರದ ಬಳಿಯ ಪುತ್ತಿಗೆ ಶ್ರೀ ನೃಸಿಂಹ ಆಡಿಟೋರಿಯಂನಲ್ಲಿ ಮಧ್ವ ಜಯಂತಿ ಉತ್ಸವವನ್ನು ಆಯೋಜಿಸಲಾಗಿದೆ .
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಅಬುದಾಬಿಯ ಉದ್ಯಮಿ ಮುರಳಿ ಕೆ. ತಂತ್ರಿ ಮಾಹಿತಿ ನೀಡಿದರು. ಅಂದು ಸಂಜೆ 4 ಗಂಟೆಯಿಂದ ಧಾರ್ಮಿಕ, ವೈಚಾರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಂಜೆ 4 ಗಂಟೆಗೆ ವಿದುಷಿ ಡಾ. ಉಷಾ ಹೆಬ್ಬಾರ್ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮದೊಂದಿಗೆ ಉತ್ಸವ ಆರಂಭವಾಗಲಿದೆ. ಸಂಜೆ 4.45ರಿಂದ 6.15ರವರೆಗೆ ‘ಆಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಆಚಾರ್ಯ ಮಧ್ವರ ತತ್ವಗಳಲ್ಲಿ ಪ್ರಮುಖವಾದ ‘ಜೀವಸ್ವಭಾವ’ದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಲಿದ್ದಾರೆ.
ಟಿಸಿಎಸ್ ನಿರ್ದೇಶಕ, ಖ್ಯಾತ ಕಲಾವಿದ ಹಾಗೂ ಚಿಂತಕ ಶೇಷಗಿರಿ ಕೆ.ಎಂ., ಮನಃಶಾಸ್ತ್ರ ತಜ್ಞ ಡಾ. ಸುದರ್ಶನ್ ಮತ್ತು ವಿದ್ವಾನ್ ಹರ್ಗ ಶ್ರೀ ರವೀಂದ್ರ ಭಟ್ ವಿಚಾರ ಮಂಡಿಸಲಿದ್ದಾರೆ. ಪಲಿಮಾರು ಮಠದ ಜ್ಞಾನ ದರ್ಶಿನಿ, ತೀರ್ಥಹಳ್ಳಿ ಇದರ ಕಾರ್ಯದರ್ಶಿ ಲಕ್ಷ್ಮೀಶ ಭಟ್ ಮುದರಂಗಡಿ ವಿಚಾರಗೋಷ್ಠಿಯನ್ನು ನಿರ್ವಹಿಸಲಿದ್ದಾರೆ.
ಆಚಾರ್ಯ ಮಧ್ವರ ತತ್ವಗಳು ಇಂದಿನ ಜೀವನಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದರ ಕುರಿತು ಚರ್ಚೆ ನಡೆಯಲಿದೆ.
ಸಂಜೆ 6.15ರಿಂದ ರಾತ್ರಿ 8.30ರವರೆಗೆ ‘ಗಾನಲಹರಿ’ ಸಂಗೀತ ಕಾರ್ಯಕ್ರಮ ಜರುಗಲಿದೆ. ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ ಅವರ ವಾಚನ ಹಾಗೂ ದಿವ್ಯಾ ಗಿರಿಧರ್ ಮತ್ತು ಬಳಗದವರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ. ಕೊನೆಯಲ್ಲಿ ವಿಶೇಷ ನಾಮಸಂಕೀರ್ತನೆ, ಮಧ್ವ ನಾಮಾವಳಿ ಹಾಗೂ ಅರ್ಚನೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠದ ವಿದ್ವಾಂಸ ವಿದ್ವಾನ್ ಕೆ.ವಿ. ರಮಣ್ ಆಚಾರ್ಯ ಉಪಸ್ಥಿತರಿದ್ದರು.

