ಬಂಟ್ವಾಳ : ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ಮಜ್ದೂರು ಸಂಘ (BMS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ, ಬಂಟ್ವಾಳ ತಾಲೂಕು ಇವರ ನೇತೃತ್ವದಲ್ಲಿ “ಮಹಿಳಾ ಶ್ರಮಿಕರ ಸಂಗಮ – 2026” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಆಶಾ ಕಾರ್ಯಕರ್ತೆಯರು ಮತ್ತು ಮಹಿಳಾ ಕಾರ್ಮಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಹೆಚ್.ಆರ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಆರೋಗ್ಯ ಮತ್ತು ಸಮಾಜದ ಆರೋಗ್ಯ ವ್ಯವಸ್ಥೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾಗಿದೆ ಎಂದು ತಿಳಿಸಿ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಮುಖ್ಯ ವಕ್ತಾರರಾದ ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಅವರು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಕುಟುಂಬ ಮತ್ತು ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿದ್ದು, ಮಹಿಳೆಯರು ಸಂಘಟಿತವಾಗಿ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ವಕೀಲ ಅನಿಲ್ ಕುಮಾರ್ ಬೆಳ್ತಂಗಡಿ ಅವರು ಮಾತನಾಡಿ, ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿ ಸೇರಿರುವ ಎಲ್ಲ ಮಹಿಳಾ ಕಾರ್ಮಿಕ ಸಹೋದರಿಯರಿಗೆ ಗೌರವಪೂರ್ವಕ ವಂದನೆ ಸಲ್ಲಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಸಮಾಜಕ್ಕೆ ಅಮೂಲ್ಯವಾಗಿದೆ ಎಂದು ಹೇಳಿದರು.
ಭಾರತೀಯ ಮಜ್ದೂರು ಸಂಘ ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾಗಿದ್ದು, 1955ರಲ್ಲಿ ದತ್ತೋಪಂತ್ ಠೇಂಗಡಿ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾಯಿತು. ಕಾರ್ಮಿಕರ ಹಿತ, ರಾಷ್ಟ್ರಹಿತ ಮತ್ತು ಸಮಾಜ ಹಿತ ಎಂಬ ತತ್ವದ ಮೇಲೆ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು ದೇಶದ ಕೋಟ್ಯಾಂತರ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ BMS ಸಂಘಟನೆ ಬಲವಾಗಿ ಬೆಳೆಯುತ್ತಿದ್ದು ಆಶಾ ಕಾರ್ಯಕರ್ತೆಯರು, ಬೀಡಿ ಕಾರ್ಮಿಕರು, ರಿಕ್ಷಾ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವ ಕಾರ್ಯ ನಡೆಯುತ್ತಿದೆ. ಕಾರ್ಮಿಕರ ಸಮಸ್ಯೆಗಳಿಗೆ ಕಾನೂನುಬದ್ಧವಾಗಿ ಹಾಗೂ ಸಂಘಟನೆಯ ಶಕ್ತಿಯಿಂದ ಪರಿಹಾರ ಕಂಡುಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದು ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿರುವ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಕಡಿಮೆ ಗೌರವಧನ, ಹೆಚ್ಚಿನ ಕೆಲಸದ ಒತ್ತಡ ಮತ್ತು ಸಾಮಾಜಿಕ ಭದ್ರತೆಯ ಕೊರತೆ ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತೀಯ ಮಜ್ದೂರು ಸಂಘ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಕರ್ನಾಟಕ ರಾಜ್ಯ ಕಾರ್ಯದರ್ಶಿ ರೇವತಿ ವಹಿಸಿದ್ದರು. ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಆಶಾ ಕಾರ್ಯಕರ್ತೆಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅವರ ಸೇವೆಯನ್ನು ಕೊಂಡಾಡಿ ಗೌರವ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ತುಳಸಿ ದೇವರಾಜ್ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಸುಜಾತ ಅವರು ಧನ್ಯವಾದ ಸಮರ್ಪಿಸಿದರು. ತಾಲೂಕು ಕಾರ್ಯದರ್ಶಿ ಡೀಲಾಕ್ಷಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಮಜ್ದೂರು ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷೆ ಗೀತಾ ಧರ್ಮರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ,ರಾಜ್ಯ ಕಟ್ಟಡ ಮತ್ತು ನಿರ್ಮಾಣ ಮಜ್ದೂರು ಸಂಘದ ಕಾರ್ಯದರ್ಶಿ ಕುಮಾರ್ ನಾಥ ಬೆಳ್ತಂಗಡಿ, ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಬಂಟ್ವಾಳ ತಾಲೂಕು ಗೌರವಾಧ್ಯಕ್ಷೆ ಗಿರಿಜಾ, ತಾಲೂಕು ಅಧ್ಯಕ್ಷರಾದ ತುಳಸಿ ದೇವರಾಜ್, ತಾಲೂಕು ಅರೋಗ್ಯ ಅಧಿಕಾರಿ ವರ್ಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾರತೀಯ ಮಜ್ದೂರು ಸಂಘ (BMS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಆಯೋಜಿಸಿದ್ದರು.

