ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮೇಜರ್ ಡಾ. ಸಹನಾ ಅವರಿಗೆ ನವಚೇತನ ಸೇವಾ ಬಳಗದಿಂದ ಸನ್ಮಾನ

0
21

ಮೂಡುಬಿದಿರೆ : ಭಾರತೀಯ ಭೂಸೇನೆಯಲ್ಲಿ ಮೇಜರ್ ಹಾಗೂ ಡೆಂಟಲ್ ಮೆಡಿಕಲ್ ಆಫೀಸರ್ ಆಗಿ ಐದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಇದೀಗ ಸೇವೆಯಿಂದ ನಿವೃತ್ತಿ ಹೊಂದಿರುವ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಹೆಮ್ಮೆಯ ಪುತ್ರಿ ಮೇಜರ್ ಡಾ. ಸಹನಾ ಅವರನ್ನು ನವಚೇತನ ಸೇವಾ ಬಳಗ (ರಿ.) ತೋಡಾರು ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ದೇಶದ ರಕ್ಷಣಾ ಸೇವೆಯಲ್ಲಿ ವೈದ್ಯಾಧಿಕಾರಿಯಾಗಿ ಐದು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಭಾರತೀಯ ಸೇನೆಗೆ ತಮ್ಮದೇ ಆದ ಸೇವೆ ಸಲ್ಲಿಸಿರುವ ಡಾ. ಸಹನಾ ಅವರ ಸಾಧನೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೇನಾ ಸೇವೆಯ ಮೂಲಕ ದೇಶಸೇವೆ ಸಲ್ಲಿಸಿರುವುದು ಮುಡಾರು ಗ್ರಾಮದ ಜನತೆಗೆ ಹಾಗೂ ಅವರ ಕುಟುಂಬಕ್ಕೆ ಹೆಮ್ಮೆಯ ವಿಚಾರವಾಗಿದೆ.

ಡಾ. ಸಹನಾ ಅವರು ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಶೇನರಬೆಟ್ಟು ನಿವಾಸಿ ಶ್ರೀ ಬ್ರಹ್ಮಾನಂದ ಕಾಮತ್ ಹಾಗೂ ಜಯಶ್ರೀ ದಂಪತಿಯ ಪುತ್ರಿ. ಬೆಂಗಳೂರಿನ ಡಾ. ಸಚಿನ್ ಅವರ ಪತ್ನಿಯಾಗಿದ್ದಾರೆ.

ಈ ಸಂದರ್ಭದಲ್ಲಿ ನವಚೇತನ ಸೇವಾ ಬಳಗದ ಸ್ಥಾಪಕರಾದ ಸುಕೇಶ್ ಜಿ. ಅಂಚನ್ ತೋಡಾರು, ಅಧ್ಯಕ್ಷರಾದ ಕಿರಣ್ ಕುಲಾಲ್ ಸಾಣೂರು, ಸದಸ್ಯರಾದ ರಜತ್ ರಾಮ್ ಬಜಗೋಳಿ, ವಿಶಾಲ್ ಸಾಲ್ಯಾನ್ ಬೋಳ ಹಾಗೂ ಜಯರಾಮ್ ಸಾಲ್ಯಾನ್ ಬೋಳ ಉಪಸ್ಥಿತರಿದ್ದರು.