ಮಂತ್ರಾಲಯ: ಗುರು ರಾಘವೇಂದ್ರ ಸ್ವಾಮಿ ಮಠದ ಸಮೀಪ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ ಶೆಡ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯದಲ್ಲಿ ನಡೆದಿದೆ.
ನರಹರಿ ತೀರ್ಥ ವಸತಿ ಗೃಹದ ಬಳಿ ನಿರ್ಮಿಸಿದ್ದ ಶೆಡ್‌ನಲ್ಲಿ ಶ್ರೀಮಠದ ಟೈಲ್ಸ್ ಕಾಮಗಾರಿಗಾಗಿ ಉತ್ತರ ಪ್ರದೇಶದಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಕಾರ್ಮಿಕರು ವಾಸವಾಗಿದ್ದರು. ಶೆಡ್‌ನಲ್ಲಿದ್ದ ನಾಲ್ಕು ಸಿಲಿಂಡರ್‌ಗಳಲ್ಲಿ ಮೂರು ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಬೆಂಕಿ ವೇಗವಾಗಿ ಹಬ್ಬಿ ಶೆಡ್ ಸಂಪೂರ್ಣ ಹೊತ್ತಿ ಉರಿದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುಬುಧೇಂದ್ರ ತೀರ್ಥರು, ಶೆಡ್‌ನಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

