ಮಲ್ಪೆ- ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

0
10


ಉಡುಪಿ: ರಾ. ಹೆ. 169 ಎ ರ ಮಲ್ಪೆಯಿಂದ ಕರಾವಳಿ ಬೈಪಾಸ್​ವರೆಗಿನ ಬಾಕಿ ಉಳಿದಿರುವ ಭೂ ಸ್ವಾಧಿನ ಪ್ರಕ್ರಿಯೆಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಭೂ ಮಾಲೀಕರಿಗೆ ಪರಿಹಾರ ಧನವನ್ನು ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್​ಹಾಲ್​ನಲ್ಲಿ ರಾ.ಹೆ. 169 ಎ ಕಾಮಗಾರಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾ. ಹೆ.169 ಎ ರ ಮಲ್ಪೆ – ತೀರ್ಥಹಳ್ಳಿವರೆಗಿನ ಕಾಮಗಾರಿ ಜಿಲ್ಲೆಯಲ್ಲಿ ಅಂತಿಮ ಹಂತದಲ್ಲಿದೆ. ಆದರೆ ಕಾಮಗಾರಿ ನಡೆಯುತ್ತಿರುವ ಕೆಲವು ಕಡೆಗಳಲ್ಲಿ ಭೂ ಸ್ವಾಧಿನ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಆಗದ ಕಾರಣ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಭೂ ಸ್ವಾಧಿನ ಕಾರ್ಯಗಳನ್ನು ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿಯಂತರರ ಇಲಾಖೆಯವರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಪೂರ್ಣಗೊಳಿಸಬೇಕು ಎಂದರು.
ಭೂ ಮಾಲೀಕರಿಗೆ ವೈಜ್ಞಾನಿಕವಾಗಿ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿರುವುದು ಸರಿಯಲ್ಲ. ಪದೇ ಪದೇ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚಿಸಿದರೂ ಅಧಿಕಾರಿಗಳು ರ್ನಿಲಕ್ಷ್ಯ ವಾಗುತ್ತಿರುವುದು ಸರಿಯಲ್ಲ ಎಂದರು.
ನೆನೆಗುದಿಗೆ ಬಿದ್ದಿರುವ ಪರ್ಕಳ ಭೂಸ್ವಾಧಿನ ಪ್ರಕ್ರಿಯೆಯಲ್ಲಿ 8.25 ಕೋಟಿ ರೂ. ಅನ್ನು ಕೋರ್ಟ್​ಗೆ ಜಮಾ ಮಾಡಲಾಗಿದೆ. 13 ಜನರಿಗೆ ಸಂಬಂಧಿಸಿದ 419 ಮೀ ನಲ್ಲಿ ಒಬ್ಬರು ಮಾತ್ರ ಕೋರ್ಟ್​ಗೆ ಹೋಗಿದ್ದು, ಈ ಬಗ್ಗೆ ಮರು ಸರ್ವೆ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದರು.
ಹಿರಿಯಡ್ಕದಿಂದ ಪೆರ್ಡೂರು ವರೆಗೆ ಬಾಕಿ ಇದ್ದ 2.69 ಕಿಲೋ ಮೀಟರ್​ ಸ್ವಾಧಿನವಾಗಿದೆ. ಹೆಬ್ರಿ ಪಾಡಿಗಾರ ಪ್ರದೇಶದಲ್ಲಿ 1.4 ಕಿ.ಮೀ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಮರ ಕಡಿಯಲು ಅನುಮತಿ ನೀಡಲಾಗಿದೆ ಆದರೆ ಮರ ತೆರವು ಕಾರ್ಯ ಬಾಕಿ ಇದೆ. ಮರಗಳ ತೆರವು ಕಾರ್ಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪೂರ್ಣಗೊಳಿಸಬೇಕೆಂದು ದೂರವಾಣಿ ಮೂಲಕ ಸೂಚನೆ ನೀಡಿದರು.
ಹೆಬ್ರಿ ಯಿಂದ ಆಗುಂಬೆ ಘಾಟಿವರೆಗೆ ಕಾಮಗಾರಿಗೆ 72 ಕೋಟಿ ಬಿಡುಗಡೆ ಯಾಗಿದೆ. ಹೆಬ್ರಿ ಬಳಿಕ ಆಗುಂಬೆ ವರೆಗೆ ಕಾಮಗಾರಿಗೆ ಡಿ.ಪಿ.ಆರ್​ ಅನ್ನು ತ್ವರಿತವಾಗಿ ತಯಾರಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಭೂ ಸ್ವಾಧಿನ ಆದ ಭೂ ಮಾಲೀಕರಿಗೆ ನೋಟಿಸ್​ ನೀಡಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ. ವಿನಾಕಾರಣ ಕಾಮಗಾರಿಯಲ್ಲಿ ವಿಳಂಬ ತೋರಿಸಬಾರದು ಎಂದರು.
ಕಲ್ಮಾಡಿಯಿಂದ ಮಲ್ಪೆ ಹಾರ್ಬರ್​ ವರೆಗಿನ 1.18 ಕಿಲೋ ಮೀಟರ್​ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಂಡಿದೆ. ನಾಳೆಯಿಂದಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಅಭಿಯಂತರರಿಗೆ ಸೂಚನೆ ನೀಡಿದರು.
ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ರಾ. ಹೆದ್ದಾರಿಯಲ್ಲಿ ಜಾಗ ಕಳೆದುಕೊಂಡಿರುವ ಮತ್ತು ಪರಿಹಾರ ಧನ ಪಾವತಿಸಲು ಬಾಕಿ ಇರುವವರ ಪಟ್ಟಿ ತಯಾರಿಸಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ತಿಳಿಸಿದರು.
ಸಭೆಯಲ್ಲಿ ಕಾರ್ಕಳ ಶಾಸಕ ಸುನಿಲ್​ ಕುಮಾರ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಕುಂದಾಪುರ ಸಹಾಯಕ ಕಮಿಶನರ್​ ರಶ್ಮಿ, ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯಕ್​, ನಗರಸಭೆ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಶೃಂಗೇರಿ- ಚಿಕ್ಕಮಗಳೂರು ರಾ. ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.