ದಕ್ಷಿಣ ಕನ್ನಡ ಜಿಲ್ಲಾಡಳಿತ, ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಜೆಪ್ಪು ಹಾಗೂ ಶ್ರೀ ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ “ಸರಕಾರಿ ಉದ್ಯೋಗ ಮಾಹಿತಿ ಕಾರ್ಯಾಗಾರ” ವನ್ನು ದಿನಾಂಕ 30-01-2026 ರಂದು ಅಪರಾಹ್ನ 2:30 ರಿಂದ 4:30 ರವರೆಗೆ ಶ್ರೀ ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಿಗೆ ಸರಕಾರಿ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು, ನೇಮಕಾತಿ ಪ್ರಕ್ರಿಯೆ ಹಾಗೂ ತಯಾರಿಯ ಕುರಿತು ಸ್ಪಷ್ಟ ಮಾಹಿತಿ ಮತ್ತು ಸರಿಯಾದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಟ್ರಸ್ಟಿನ ತಜ್ಞರ ಸಮಿತಿಯ ಸದಸ್ಯರಾದ ಮಂಜುಳಾ ಜಿ ಇವರು ಪ್ರಸ್ತಾವನೆ ಹಾಗೂ ಸ್ವಾಗತ ಭಾಷಣವನ್ನು ನೀಡಿದರು. ಬಳಿಕ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಸಹಾಯಕ ಆಡಳಿತ ಅಧಿಕಾರಿ ರೇವತಿ ಕೆ ಹಾಗೂ ಮೆಸ್ಕಾಂ ವಿಭಾಗದ ಸಹಾಯಕ ಪ್ರದಾನ ವ್ಯವಸ್ಥಾಪಕರಾದ (ಆಡಳಿತ) ಶ್ರೀ ಪುಷ್ಪರಾಜ್ ಇವರು ಉಪನ್ಯಾಸ ನೀಡಿದರು. ಅವರು ತಮ್ಮ ತಮ್ಮ ಇಲಾಖೆಗಳಲ್ಲಿರುವ ಉದ್ಯೋಗಾವಕಾಶಗಳು, ನೇಮಕಾತಿ ವಿಧಾನ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ತಯಾರಿಯ ಕುರಿತು ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿಯಾದ ದಿವ್ಯ ಇವರು ನಡೆಸಿಕೊಟ್ಟರು. ಈ ಸಂದರ್ಭ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ರಘುರಾಜ್ ಹಾಗೂ ಸಂಚಾಲಕರಾದ ವಸಂತ ಕಾರಂದೂರು ಇವರು ಉಪಸ್ಥಿತರಿದ್ದರು. ಜೊತೆಗೆ ಟ್ರಸ್ಟಿನ ತಜ್ಞರ ಸಮಿತಿಯ ಸದಸ್ಯರಾದ ಡಾ. ನಯನ ಪಕ್ಕಳ ಹಾಗೂ ಟ್ರಸ್ಟಿನ ಸಂಯೋಜಕರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗಗಳ ಬಗ್ಗೆ ಸ್ಪಷ್ಟ ಅರಿವು ಮೂಡಿಸುವುದರ ಜೊತೆಗೆ, ಮುಂದಿನ ಭವಿಷ್ಯಕ್ಕಾಗಿ ಸರಿಯಾದ ದಿಕ್ಕಿನಲ್ಲಿ ತಯಾರಾಗಲು ಪ್ರೇರಣೆ ನೀಡಿತು.

