ಮಂಗಳೂರು : ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಮಂಗಳೂರು ಸಂಸ್ಥೆಯು 2025-26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶೋತ್ಸವ, “ಮುನ್ನುಡಿ” (ಸ್ಟುಡೆಂಟ್ ಇಂಡಕ್ಷನ್ ಪ್ರೋಗ್ರಾಂ) ಉದ್ಘಾಟನಾ ಕಾರ್ಯಕ್ರಮವನ್ನು ಭವ್ಯವಾಗಿ ದಿನಾಂಕ 23-06-2025 ರಂದು ಸಂಸ್ಥೆಯ ಸಭಾಂಗಣದಲ್ಲಿ ನೆಡೆಸಲಾಯಿತು.
ಕಾರ್ಯಕ್ರಮವನ್ನು ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರಾದ ಮತ್ತು ಕೆಪಿಟಿ ಮಂಗಳೂರಿನ ಹಳೇ ವಿದ್ಯಾರ್ಥಿಯೂ ಆದ ಡಾ. ಪುರುಷೋತ್ತಮ ಚಿಪ್ಪಾರ್ ಅವರು ಉದ್ಘಾಟಿಸಿದರು. “ನಾನು, ಹಿಂದೆ ಇದೇ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದೆ. ಕೆಪಿಟಿಯ ವಿದ್ಯಾರ್ಥಿ ಜೀವನ, ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದು. ತಾಂತ್ರಿಕ ಶಿಕ್ಷಣವು ನಿಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿದೆ.” ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದರು.
ಮುಖ್ಯ ಅತಿಥಿಗಳಾಗಿ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ರಾಜ್ಯ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಡಾ. ಮುರಲೀ ಮೋಹನ್ ಚೂಂತಾರು ಇವರು ಭಾಗವಹಿಸಿದರು. “ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳು ಒಂದೇ ನಾಣ್ಯದ ಎರಡು ಮುಖಗಳು. ಎರಡೂ ಕ್ಷೇತ್ರಗಳು ಮಾನವಕುಲದ ಸೇವೆಗಾಗಿ ಕೆಲಸ ಮಾಡುತ್ತವೆ. ನಿಮ್ಮ ವಿದ್ಯಾಭ್ಯಾಸದಲ್ಲಿ ಶಿಸ್ತು ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ.” ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹರೀಶ ಶೆಟ್ಟಿ, ಪ್ರಾಂಶುಪಾಲರು, ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಮಂಗಳೂರು ಇವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ನಮ್ಮ ಗುರಿ ಪ್ರತಿ ವಿದ್ಯಾರ್ಥಿಗೂ ಉದ್ಯೋಗೋನ್ಮುಖ ತರಬೇತಿ ನೀಡುವುದು. ನೀವು ಕೇವಲ ವಿದ್ಯಾರ್ಥಿಗಳಲ್ಲ, ನಮ್ಮ ಸಂಸ್ಥೆಯ ಭವಿಷ್ಯ.” ಎಂದು ನುಡಿದರು.
ಅತಿಥಿಗಳಾದ ಶ್ರೀ ದೇವಾನಂದ ಎಂ.ಸಿ. ಅಧ್ಯಕ್ಷರು, ಹಳೇ ವಿದ್ಯಾರ್ಥಿಗಳ ಸಂಘ, ಕೆಪಿಟಿ ಮಂಗಳೂರು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶ್ರೀಮತಿ ವಿನೋದ ಕುಮಾರಿ, ಅಧೀಕ್ಷಕರು, ಕೆಪಿಟಿ ಮಂಗಳೂರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ತಹಸೀನ ಅರಾ, ಉಪನ್ಯಾಸಕರು, ಇಂಗ್ಲೀಶ್ ವಿಭಾಗ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಇ & ಸಿ ಎಂಜಿನಿಯರಿಂಗ್ ವಿಭಾಗದ ವಿಭಾಗಾಧಿಕಾರಿ ಮತ್ತು ಎನ್ ಸಿ ಸಿ ಅಧಿಕಾರಿ ಲೆ. ಸತೀಶ ಕೆ.ಯಂ. ಅವರು ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಚಂದ್ರಿಕಾ, ಹಿರಿಯ ಬೆರಳಚ್ಚು ಗಾರರು, ಕೆಪಿಟಿ ಮಂಗಳೂರು ಅವರು ನಿರ್ವಹಿಸಿದರು. ಶ್ರೀಮತಿ ಪ್ರಮೀಳ ಫೆರಾರೋ, ಗ್ರಂಥಪಾಲಕರು ಅವರು ವಂದನಾರ್ಪಣೆ ಸಲ್ಲಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ಅರ್ಚನಾ ಜೆ, ಶ್ರೀಮತಿ ಸುಮತಿ, ಶ್ರೀಮತಿ ಸುನಂದ ಟಿ ಎಚ್ ಮತ್ತು ಶ್ರೀಮತಿ ಕುಮುದಿನಿ ಅವರುಗಳು ಗಣ್ಯ ಅತಿಥಿಗಳ ವ್ಯಕ್ತಿತ್ವ ಪರಿಚಯವನ್ನು ಸೊಗಸಾಗಿ ನಿರ್ವಹಿಸಿದರು. ಇ & ಸಿ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಅನುಶ್ರೀ ಪಿ ನಾಯಕ್ ಪ್ರಾರ್ಥನೆಯನ್ನು ಮನೋಜ್ಞವಾಗಿ ನಡೆಸಿಕೊಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ವಿಭಾಗಾಧಿಕಾರಿಗಳು, ಉಪನ್ಯಾಸಕ ವರ್ಗದ ಸದಸ್ಯರು, ಸಿಬ್ಬಂದಿ ವರ್ಗದ ಎಲ್ಲಾ ಸದಸ್ಯರು, ಹಾಗೂ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದುಕೊಂಡ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು. ಹೊಸ ವಿದ್ಯಾರ್ಥಿಗಳ ಪೋಷಕರು ಸಹ ಸಂಭ್ರಮದಿಂದ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಮುನ್ನುಡಿ ಕಾರ್ಯಕ್ರಮದ ಸಂಯೋಜಕರಾಗಿ ಉಪನ್ಯಾಸಕರಾದ ಶ್ರೀಮತಿ ತಹಸೀನ ಅರಾ, ಶ್ರೀಮತಿ ಲೀಲಾವತಿ ಆರ್, ಶ್ರೀ ಪವಿತ್ರಕುಮಾರ ಎಂ, ಶ್ರೀ ದೇವರಾಜ್ ಆರ್ ನಾಯಕ್, ಶ್ರೀ ಹರೀಶ ಸಿ ಪಿ ಸಹಕಾರವನ್ನು ನೀಡಲಿದ್ದಾರೆ.