ಹೊಸದಿಲ್ಲಿ : ಹಲವಾರು ವರ್ಷಗಳಿಂದ ಒಂದೇ ದರವನ್ನು ನಿರ್ವಹಿಸುತ್ತಿದ್ದ ಭಾರತೀಯ ರೈಲ್ವೇ ಈಗ ರೈಲು ಟಿಕೆಟ್ ದರವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ. ಜು. 1ರಿಂದ ಎಸಿ, ಎಸಿ ರಹಿತ, ಎಕ್ಸ್‌ಪ್ರೆಸ್ ಹಾಗೂ ದ್ವಿತೀಯ ದರ್ಜೆ ಟಿಕೆಟ್ ದರದಲ್ಲಿ ಏರಿಕೆ ಮಾಡಲು ಮುಂದಾಗಿದೆ.
ಎಸಿ ರಹಿತ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ದರದಲ್ಲಿ ಪ್ರತೀ ಕಿ.ಮೀ.ಗೆ ಕನಿಷ್ಠ 1 ಪೈಸೆ ಹೆಚ್ಚಿಸಲಾಗುತ್ತಿದೆ. ಎಸಿ ರೈಲುಗಳ ಟಿಕೆಟ್ ದರದಲ್ಲಿ ಪ್ರತೀ ಕಿ.ಮೀ.ಗೆ 2 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ದ್ವಿತೀಯ ದರ್ಜೆಯ ರೈಲುಗಳ ಟಿಕೆಟ್‌ನಲ್ಲಿ 500 ಕಿ.ಮೀ.ವರೆಗೆ ಹೆಚ್ಚಳವಿರುವುದಿಲ್ಲ. ವೆಚ್ಚ ನಿರ್ವಹಣೆಗಾಗಿ ಈ ಕ್ರಮ ಆಗಲಿದೆ. ದರಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲ ಎಂದು ರೈಲ್ವೇ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.