ಕರ್ನಾಟಕದ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ಪೈಕಿ ಎರಡನೇ ಸ್ಥಾನ
ಮಂಗಳೂರು: ನವೆಂಬರ್ 3ರಂದು ಪ್ರಕಟಗೊಂಡ 2026ರ ಕ್ಯೂಎಸ್ (QS) ಏಷ್ಯಾ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಏಷ್ಯಾ ಮಟ್ಟದಲ್ಲಿ 901–950ನೇ ಸ್ಥಾನದ ಶ್ರೇಣಿಯಲ್ಲಿ ಗುರುತಿಸಿಕೊಂಡಿದೆ. ಇದೇ ಶ್ರೇಣಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಸ್ಥಾನ ಪಡೆದಿದೆ.
ದಕ್ಷಿಣ ಏಷ್ಯಾ ಮಟ್ಟದಲ್ಲಿ 287ನೇ ಸ್ಥಾನ, ಭಾರತದಲ್ಲಿ 153ನೇ ಸ್ಥಾನ ಹಾಗೂ ಕರ್ನಾಟಕದ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ಪೈಕಿ ಎರಡನೇ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾಲಯ ಪಡೆದುಕೊಂಡಿದೆ. ಮೈಸೂರು ವಿಶ್ವವಿದ್ಯಾಲಯವು ಏಷ್ಯಾ ಮಟ್ಟದಲ್ಲಿ 801–850ನೇ ಸ್ಥಾನದ ಶ್ರೇಣಿಯಲ್ಲಿದೆ.
ಕ್ಯೂಎಸ್ ವಿಶ್ವವಿದ್ಯಾಲಯಗಳ ಶ್ರೇಯಾಂಕವನ್ನು ಶೈಕ್ಷಣಿಕ ಪ್ರತಿಷ್ಠೆ, ಸಂಶೋಧನಾ ಸಾಧನೆ, ಬೋಧನಾ ಗುಣಮಟ್ಟ, ಉದ್ಯೋಗಾವಕಾಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಂಪರ್ಕ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ಬಾರಿ ಭಾರತದ ಒಟ್ಟು 325 ಉನ್ನತ ಶಿಕ್ಷಣ ಸಂಸ್ಥೆಗಳು ಶ್ರೇಯಾಂಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.
ಮಂಗಳೂರು ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಹೊಂದಿರುವ ಬೋಧಕ ಸಿಬ್ಬಂದಿಯ ಪ್ರಮಾಣ ಹಾಗೂ ಸ್ಕೋಪಸ್ (Scopus) ದತ್ತಸಂಚಯದಲ್ಲಿ ಸೂಚ್ಯಂಕಗೊಂಡ ಪ್ರತಿ ಅಧ್ಯಾಪಕರ ಸಂಶೋಧನಾ ಪ್ರಕಟಣೆಗಳಂತಹ ಪ್ರಮುಖ ಮಾನದಂಡಗಳಲ್ಲಿ ಉತ್ತಮ ಸಾಧನೆ ಮಾಡಿದೆ.
ಈ ಸಾಧನೆಯು ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ದೊರೆತಿರುವ ಮಹತ್ವದ ಗುರುತಿಸುವಿಕೆಯಾಗಿದೆ.
