ಮಂಗಳೂರು: ನಾಪತ್ತೆಯಾಗಿದ್ದ ಮುಲ್ಕಿಯ ಆಟೋ ಚಾಲಕ ಶವವಾಗಿ ಪತ್ತೆ

0
740


ಮಂಗಳೂರು,: ನಗರದ ಹೊರವಲಯದ ಮುಲ್ಕಿ ಸಮೀಪದ ಕೋಲ್ನಾಡ್ ನ ಆಟೋ ಚಾಲಕ ಮುಹಮ್ಮದ್ ಶರೀಫ್ (52) ಎಂಬವರು ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದು ಮೃತ ದೇಹವು ಗುರುವಾರ ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ
ಆಟೋ ಚಾಲಕ ಮುಹಮ್ಮದ್ ಶರೀಫ್ ತನ್ನ ರಿಕ್ಷಾವನ್ನು ನಗರದ ಕೊಟ್ಟಾರ ಚೌಕಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಬುಧವಾರ ಎಂದಿನಂತೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದಿದ್ದರು. ಆದರೆ ಎಂದಿನಂತೆ ವಾಪಸ್ ಮನೆಗೆ ಬಾರದ ಕಾರಣ ಮತ್ತು ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗದ ಕಾರಣ ಮನೆ ಮಂದಿ ಆತಂಕ ಗೊಂಡಿದ್ದರು. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಕಾಣೆಯಾಗಿರುವ ಬಗ್ಗೆ ಸಂದೇಶ ರವಾನಿಸಲಾಗಿತ್ತು.
ಗುರುವಾರ ರಾತ್ರಿಯ ವೇಳೆಗೆ ಮುಹಮ್ಮದ್ ಶರೀಫ್‌ರ ಮೃತದೇಹವು ಕರ್ನಾಟಕ-ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಪತ್ತೆಯಾಗಿದೆ. ಪಕ್ಕದಲ್ಲೇ ರಿಕ್ಷಾ ಕೂಡ ಇದೆ. ಬಾವಿಯ ಬಳಿ ರಕ್ತದ ಕಲೆಗಳು ಕಂಡು ಬಂದಿದ್ದು ಮಾದಕ ವ್ಯಸನಿಗಳು ಕೊಲೆಗೈದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿರುವ ಮುಹಮ್ಮದ್ ಶರೀಫ್ ದಿನಾ ಬೆಳಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದು ಬಾಡಿಗೆಗೆ ರಿಕ್ಷಾ ಓಡಿಸುತ್ತಾರೆ. ತಡರಾತ್ರಿಯಾದರೂ ಸರಿ, ಮನೆಗೆ ಮರಳುತ್ತಾರೆ. ಆದರೆ ಬುಧವಾರ ಬೆಳಗ್ಗೆ ಮನೆಯಿಂದ ಹೊರಟು ಮಂಗಳೂರಿಗೆ ಬಂದಿದ್ದ ಮುಹಮ್ಮದ್ ಶರೀಫ್ ಗುರುವಾರ ತಡರಾತ್ರಿಯವರೆಗೂ ಮನೆಗೆ ಮರಳಲಿಲ್ಲ ಎನ್ನಲಾಗಿದೆ. ಹಾಗಾಗಿ ಹುಡುಕಾಟ ನಡೆಸಲಾಯಿತು. ಮುಸ್ಸಂಜೆಯ ವೇಳೆಗೆ ಕೇರಳ ಗಡಿ ಭಾಗದ ತಲಪಾಡಿ ಸಮೀಪದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಮುಹಮ್ಮದ್ ಶರೀಘರ ಮೃತದೇಹವಿರುವ ಬಗ್ಗೆ ಮಾಹಿತಿ ಬಂತು. ಗಾಂಜಾ ವ್ಯಸನಿಗಳು ಮುಹಮ್ಮದ್ ಶರೀಫ್‌ರನ್ನು ಬಾಡಿಗೆಗೆ ಕರೆಕೊಂಡು ಹೋಗಿ ಬಳಿಕ ಅದ್ಯಾವುದೋ ಕಾರಣಕ್ಕೆ ಕೊಲೆಗೈದಿರಬೇಕು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದ್ದು ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

LEAVE A REPLY

Please enter your comment!
Please enter your name here