ಮಹಿಳೆಯ ಉದ್ಯೋಗದ ಹಕ್ಕಿಗೆ ಮದುವೆ ಅಡ್ಡಿಯಾಗದು: ಹೈಕೋರ್ಟ್

0
35

ಬೆಂಗಳೂರು : ಮದುವೆಯಾದ ಬಳಿಕ ಅಥವಾ ತಾಯಿಯಾದ ನಂತರ ಮಹಿಳೆಯ ವೃತ್ತಿಜೀವನಕ್ಕೆ ಪೂರ್ಣವಿರಾಮ ಬೀಳಬೇಕಿಲ್ಲ. ಕುಟುಂಬದ ಜವಾಬ್ದಾರಿಗಳ ಕಾರಣಕ್ಕೆ ಮಹಿಳೆಯರು ತಮ್ಮ ವೃತ್ತಿಪರ ಕನಸುಗಳು ಮತ್ತು ಉದ್ಯೋಗಾವಕಾಶಗಳನ್ನು ಕೈಬಿಡಬೇಕಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮದುವೆ, ತಾಯ್ತನ ಹಾಗೂ ಮಕ್ಕಳನ್ನು ಬೆಳೆಸುವ ಜವಾಬ್ದಾರಿಗಳು ಮಹಿಳೆಯ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗಬಾರದು ಎಂಬ ನ್ಯಾಯಾಲಯದ ನಿಲುವು ಗಮನ ಸೆಳೆದಿದೆ. ವಿದೇಶದಲ್ಲಿ ಉದ್ಯೋಗಾವಕಾಶ ಪಡೆದ ನೇತ್ರ ತಜ್ಞೆಯೊಬ್ಬರು ತಮ್ಮ ಅಪ್ರಾಪ್ತ ಮಗನೊಂದಿಗೆ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಲು ಅನುಮತಿ ನೀಡಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಹಿಳೆಯ ವೃತ್ತಿಪರ ಕನಸುಗಳಿಗೆ ಪ್ರೋತ್ಸಾಹ

ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು ಅಕ್ಟೋಬರ್ 29ರಂದು ಪ್ರಕರಣದ ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆ. ಮುಂಬೈನಲ್ಲಿ ವಾಸವಿರುವ ಮಹಿಳೆಯ ಪತಿ, ಬೆಂಗಳೂರಿನ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮಗುವಿನ ಮೂಲ ಪಾಸ್‌ಪೋರ್ಟ್ ಪತ್ನಿಗೆ ನೀಡಬೇಕು ಹಾಗೂ ಮಗುವಿನ ವೀಸಾ ಪಡೆಯಲು ಅಗತ್ಯ ಒಪ್ಪಿಗೆ ನೀಡಬೇಕು ಎಂದು ಕುಟುಂಬ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇನ್ನೊಂದೆಡೆ, 2019ರಿಂದ ಮಗುವಿನ ಆರೈಕೆಯ ಜವಾಬ್ದಾರಿಯನ್ನು ತಾನೇ ನಿರ್ವಹಿಸುತ್ತಿರುವುದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೇತ್ರ ತಜ್ಞೆಯಾಗಿ ಉದ್ಯೋಗಾವಕಾಶ ದೊರೆತಿದ್ದು, ಇದರಿಂದ ಮಗುವಿಗೆ ಉತ್ತಮ ವಸತಿ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಸಾಧ್ಯವಾಗಲಿದೆ ಎಂದು ವಾದಿಸಿದ್ದರು.

ತಂದೆ-ಮಗನ ಬಾಂಧವ್ಯಕ್ಕೂ ಆದ್ಯತೆ

ಮಹಿಳೆಯ ವೃತ್ತಿಜೀವನದ ಅವಕಾಶಗಳಿಗೆ ಮಾನ್ಯತೆ ನೀಡಿದ ನ್ಯಾಯಾಲಯ, ಮಗುವಿನೊಂದಿಗೆ ತಂದೆಯ ಸಂಬಂಧವೂ ಮುಂದುವರಿಯಬೇಕು ಎಂಬುದನ್ನು ಸ್ಪಷ್ಟಪಡಿಸಿದೆ.

ತಂದೆ ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಆಡಿಯೋ ಅಥವಾ ವಿಡಿಯೋ ಕರೆ ಮೂಲಕ ಮಗುವಿನೊಂದಿಗೆ ಮಾತನಾಡಲು ತಾಯಿ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ.

ಅಲ್ಲದೆ, ಮಗುವಿನ ಶಾಲಾ ರಜೆಗಳ ಸಂದರ್ಭದಲ್ಲಿ ತಂದೆಗೆ ಭೇಟಿಯಾಗುವ ಅವಕಾಶ ನೀಡಬೇಕು. ವರ್ಷದಲ್ಲಿ ಎರಡು ಬಾರಿ ರಜೆಯ ಸಮಯದಲ್ಲಿ ಮಗು ಭಾರತಕ್ಕೆ ಬಂದು ಶೇಕಡಾ 75ರಷ್ಟು ರಜೆಯನ್ನು ತಂದೆಯೊಂದಿಗೆ ಕಳೆಯಬೇಕು. ತಂದೆಯೂ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಿ ರಜೆಯ ಶೇಕಡಾ 75ರಷ್ಟು ಅವಧಿಯನ್ನು ಮಗುವಿನೊಂದಿಗೆ ಕಳೆಯಲು ಅವಕಾಶ ಕಲ್ಪಿಸಲಾಗಿದೆ.

ಮಹಿಳೆಯ ವೃತ್ತಿಪರ ಬೆಳವಣಿಗೆ, ಮಗುವಿನ ಉತ್ತಮ ಭವಿಷ್ಯ ಹಾಗೂ ತಂದೆ-ಮಗನ ಬಾಂಧವ್ಯ ಈ ಮೂರಕ್ಕೂ ಸಮಾನ ಮಹತ್ವ ನೀಡಿರುವ ಹೈಕೋರ್ಟ್‌ನ ಈ ಅಭಿಪ್ರಾಯ ಗಮನಾರ್ಹವಾಗಿದೆ.