ಕಲ್ಪವೃಕ್ಷ ಪ್ರಶಸ್ತಿ ಪ್ರದಾನ, ಸಹಕಾರಿ ಚಿಂತನ, ವಿವಿಧ ಕ್ಷೇತ್ರದ ಗಣ್ಯರಿಗೆ ಅಭಿನಂದನೆ, ಅಂಗನವಾಡಿ, ಶಾಲೆ ಕಾಲೇಜು,ಸಂಘ ಸಂಸ್ಥೆ ಪುರಸ್ಕಾರ
ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 111 ನೇ ವರ್ಷದ ಸಹಕಾರ ಸಪ್ತಾಹ ಸಂಭ್ರಮ 2026 ನವೆಂಬರ್ 14 ರಿಂದ 20 ರ ತನಕ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮ ಕಲ್ಪವೃಕ್ಷ ಸಭಾಭವನದಲ್ಲಿ ನಡೆಯುತ್ತದೆ.
ನವೆಂಬರ್ 14ರಂದು ಕಾರ್ಕಳ ಜೈನ ಮಠ ಸ್ವಾಮೀಜಿ ಯವರ ಆಶೀರ್ವಚನದೊಂದಿಗೆ ಪ್ರಾರಂಭವಾಗುವ ಸಪ್ತಾಹದಲ್ಲಿ ಬಲ್ಲಾಳ್ ಹೋಟೆಲ್ ಸಂಸ್ಥಾಪಕ ಕೆ ಜಯವರ್ಮರಾಜ್ ಬಲ್ಲಾಳ ಅವರಿಗೆ ಕಲ್ಪವೃಕ್ಷ ಪ್ರಶಸ್ತಿಯನ್ನು ನೀಡಲಾಗುವುದು. ನ. 15 ರಂದು ಕ್ಯಾಂಪ್ಕೋ ಬ್ರಹ್ಮ ವಾರಣಾಸಿ ಸುಬ್ರಾಯ ಭಟ್ಟ ಶತಮಾನದ ಸ್ಮರಣೆ ಡಾ ಗಣಪಯ್ಯ ಭಟ್ ರಿಂದ ನಡೆಯಲಿದೆ. ನ. 16ರಂದು ಕಾನೂನು ಮತ್ತು ಸಹಕಾರದ ಬಗ್ಗೆ ಪೃಥ್ವಿರಾಜ್ ರೈ, ನ.17ರಂದು ಸಾಹಿತ್ಯ ಮತ್ತು ಸಹಕಾರದ ಬಗ್ಗೆ ಟಿ ಎಂ ಎನ್ ಖಂಡಿಗೆ, ನ.18ರಂದು ವೈದ್ಯಕೀಯ ಕ್ಷೇತ್ರದ ಸಹಕಾರದ ಬಗ್ಗೆ ಡಾ ಪ್ರಸನ್ನ ಕಾಕುಂಜೆ, ನ.19ರಂದು ರಾಜ ಧರ್ಮ ಮತ್ತು ಸಹಕಾರದ ಬಗ್ಗೆ ಸ್ಕಂದ ಪ್ರಸಾದ್ ಭಟ್, ನ. 20ರಂದು ಡಾ ಎನ್ ಪ್ರಭಾಚಂದ್ರ ರಿಗೆ ಸಮಗ್ರ ಸಾಧಕ ಪ್ರಶಸ್ತಿ ನೀಡಲಾಗುವುದು.
ಪ್ರತಿದಿನ ಕೆಲವು ಸಕ್ರಿಯ ಸದಸ್ಯರಿಗೆ, ಸಮಾಜ ಸೇವಕರಿಗೆ, ಉದ್ಯಮ, ಕ್ರೀಡೆ, ಕೃಷಿ, ಹೈನುಗಾರಿಕೆ ಕ್ಷೇತ್ರದ ಗಣ್ಯರಿಗೆ, ವಿಶೇಷವಾಗಿ ಅಂಗನವಾಡಿಗಳಿಗೆ, ಶಾಲೆ ಕಾಲೇಜುಗಳಿಗೆ, ವಿವಿಧ ಸಂಘ-ಸಂಸ್ಥೆಗಳಿಗೆ ಪುರಸ್ಕಾರ, ಆರ್ಥಿಕ ನೆರವು, ರಾಂಕ್ ವಿಜೇತ ವಿದ್ಯಾರ್ಥಿಗಳಿಗೆ, ಹಿಂದಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಅಧ್ಯಕ್ಷ ಬಾಹುಬಲಿ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಶೇಖರ ಎಂ ಸ್ವಾಗತಿಸಿ ವಿವಿಧ ಯೋಜನೆಗಳನ್ನು ಈ ವರ್ಷ ವಿಶೇಷವಾಗಿ ಪ್ರಕಟಿಸಲಾಗುವುದು ಹಾಗೆಯೇ 17 ಅಂಗನವಾಡಿಗಳಿಗೆ ಮೊತ್ತ ಮೊದಲ ಬಾರಿಗೆ ಪ್ರೋತ್ಸಾಹ ಧನವನ್ನು ನೀಡಿ ಬಲಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ಎಂ ಗಣೇಶ್ ನಾಯಕ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಭಟ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಮನೋಜ್ ಕುಮಾರ್ ಶೆಟ್ಟಿ, ಎಮ್ ಪದ್ಮನಾಭ, ಸಿ ಎಚ್ ಅಬ್ದುಲ್ ಗಪೂರ್, ಜಯರಾಮ ಕೋಟ್ಯಾನ್, ಎಂಪಿ ಅಶೋಕ್ ಕಾಮತ್, ಅನಿತಾ ಶೆಟ್ಟಿ ಹಾಜರಿದ್ದರು.

