ಬಾಳೆ ಮುಹೂರ್ತದ ಪೂರ್ವಸಿದ್ಧತೆ ಕುರಿತು ಸೋದೆ ಮಠದ ಶಿಷ್ಯವರ್ಗದ ಸಭೆ

0
9

ಉಡುಪಿ: ದಿನಾಂಕ 29-11-2026 ರಂದು ನೆರವೇರಲಿರುವ ಸೋದೆ ಶ್ರೀ ವಾದಿರಾಜ ಮಠದ ಪರ್ಯಾಯ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳಲ್ಲಿನ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತದ ಪೂರ್ವಸಿದ್ಧತೆಗಳ ಕುರಿತು ಇಂದು ಉಡುಪಿಯ ಸೋದೆ ಶ್ರೀ ವಾದಿರಾಜ ಮಠದಲ್ಲಿ ಶಿಷ್ಯವರ್ಗದ ಸಭೆಯನ್ನು ಆಯೋಜಿಸಲಾಯಿತು.

ಈ ಸಭೆಯಲ್ಲಿ ಶ್ರೀ ಮಠದ ಪ್ರಮುಖ ಶಿಷ್ಯವರ್ಗಗಳಾದ ಕೋಟೇಶ್ವರ ಮಾಗಣೆ ಶಿಷ್ಯವೃಂದದ ಪ್ರಮುಖರು, ಮಟ್ಟು ಗ್ರಾಮ ಶಿಷ್ಯವೃಂದದ ಪ್ರಮುಖರು, ದೈವಜ್ಞ ಬ್ರಾಹ್ಮಣ ಶಿಷ್ಯವೃಂದದ ಪ್ರಮುಖರು ಹಾಗೂ ಶ್ರೀ ಮಠದ ಅನೇಕ ಭಕ್ತರು ಉಪಸ್ಥಿತರಿದ್ದರು.

ಮುಂಬರುವ ಬಾಳೆ ಮುಹೂರ್ತದ ಅಂಗವಾಗಿ ಕೈಗೊಳ್ಳಬೇಕಾದ ವಿವಿಧ ಪೂರ್ವಸಿದ್ಧತೆಗಳು, ಕಾರ್ಯಕ್ರಮಗಳ ವ್ಯವಸ್ಥೆ ಹಾಗೂ ಮುಹೂರ್ತದ ಪ್ರಯುಕ್ತ ಆಯೋಜಿಸಲು ಉದ್ದೇಶಿಸಿರುವ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು. ಕಾರ್ಯಕ್ರಮಗಳ ಯಶಸ್ವಿ ಆಯೋಜನೆಗಾಗಿ ಅಗತ್ಯವಿರುವ ಸಿದ್ಧತೆಗಳು ಹಾಗೂ ಜವಾಬ್ದಾರಿಗಳ ಹಂಚಿಕೆಯ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶ್ರೀ ಮಠದ ದಿವಾನರಾದ ಶ್ರೀ ಪಾಡಿಗಾರು ಶ್ರೀನಿವಾಸ ತಂತ್ರಿಗಳು, ಸೋದೆ ಮಠ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಯಕ್ಷಗಾನ ಕಲಾರಂಗದ ವತಿಯಿಂದ ಶ್ರೀ ಮುರಳಿ ಕಡೆಕಾರ್, ನಾರಾಯಣ ಹೆಗಡೆ ಮತ್ತು ಗಂಗಾಧರ್ ರಾವ್ ಹಾಗೂ ಶ್ರೀ ಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.