ಕಾಪು : ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕೆಪಿಸಿಸಿ ಪ್ರಚಾರ ಸಮಿತಿ ಉಡುಪಿ ಜಿಲ್ಲೆ, ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ನವೆಂಬರ್ 27ರಂದು ಉಚಿತ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮಾಜಿ ಸಚಿವರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಉದ್ಯೋಗ ಮೇಳವು ಅಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2.30ರವರೆಗೆ ಉಳಿಯಾರಗೊಳಿಯ ದಂಡತೀರ್ಥ ಪಿಯು ಕಾಲೇಜು ಮತ್ತು ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಐಟಿಐ, ಸ್ನಾತಕೋತ್ತರ ಪದವಿ, ಎಂಬಿಎ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವವರು ಹಾಗೂ ಅನುಭವಿಗಳೂ, ಹೊಸದಾಗಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೂ ಈ ಮೇಳದಲ್ಲಿ ಭಾಗವಹಿಸಬಹುದು. ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ರೆಸ್ಯೂಮ್‌ಗಳನ್ನು ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಐಟಿ-ಬಿಟಿ, ಬಿಪಿಒ, ಆಟೋಮೊಬೈಲ್, ಶಿಕ್ಷಣ, ರಿಟೇಲ್, ಮಾರ್ಕೆಟಿಂಗ್, ಹೌಸ್‌ಕೀಪಿಂಗ್, ಫಾರ್ಮಸಿ ಸೇರಿದಂತೆ ವಿವಿಧ ಕ್ಷೇತ್ರಗಳ 50ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗಾವಕಾಶಗಳನ್ನು ಒದಗಿಸಲಿವೆ. ಆಸಕ್ತರು ಆನ್‌ಲೈನ್ ಮೂಲಕವೂ ಅರ್ಜಿ ನೋಂದಾಯಿಸಿಕೊಳ್ಳಲು ಅವಕಾಶವಿದೆ.
“ಕೆಪಿಸಿಸಿ ಪ್ರಚಾರ ಸಮಿತಿಯ ನಡೆ ನಿರುದ್ಯೋಗಿಗಳ ಕಡೆಗೆ” ಎಂಬ ಆಶಯದೊಂದಿಗೆ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

