ಶಿವಪುರ ಕೆಳಖಜಾನೆ ಲೋವೋಲ್ಟೇಜ್ ಸಮಸ್ಯೆ : ಸರಿಪಡಿಸಲು ಮನವಿ.
ಹೆಬ್ರಿ : ಶಿವಪುರ ಗ್ರಾಮದ ಕೆಳಖಜಾನೆಯಲ್ಲಿ ವಿದ್ಯುತ್ ಲೋಒಲ್ಟೇಜ್ ನಿಂದಾಗಿ ಬೋರ್ ವೆಲ್ ಗೆ ಅಳವಡಿಸಿರುವ ವಿದ್ಯುತ್ ಪಂಪು ನಿರಂತರವಾಗಿ ಕೆಟ್ಟು ಹೋಗಿ ತುರ್ತು ಕುಡಿಯುವ ನೀರಿನ ಸರಬರಾಜಿಗೆ ಸಮಸ್ಯೆಯಾಗುತ್ತಿದೆ. ಈ ಸಲ ಎಪ್ರಿಲ್ ಮೇ ತಿಂಗಳಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ತುರ್ತು ಬೇಸಿಗೆ ಲೋಒಲ್ಟೇಜ್ ಸಮಸ್ಯೆಯನ್ನು ನಿವಾರಿಸುವಂತೆ ಪತ್ರಕರ್ತ ಸುಕುಮಾರ್ ಮುನಿಯಾಲ್ ಉಡುಪಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದು ತಕ್ಷಣ ಪರಿಶೀಲಿಸುವಂತೆ ಉಡುಪಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ದಿನೇಶ ಉಪಾಧ್ಯಾಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಸೋಮವಾರ ಹೆಬ್ರಿ ಮೆಸ್ಕಾಂ ಉಪ ವಿಭಾಗದ ಕಛೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಉಡುಪಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ದಿನೇಶ ಉಪಾಧ್ಯಾಯ ಮಾತನಾಡಿ ಮೆಸ್ಕಾಂ ಗ್ರಾಹಕರಿಂದ ಹೆಚ್ಚಾಗಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆದ್ಯತೆ ನೀಡುತ್ತಿದೆ. ಡಿಜಿಟಲೀಕರಣ, ಆನ್ ಲೈನ್ ವ್ಯವಹಾರವನ್ನು ಹೆಚ್ಚಾಗಿ ಗ್ರಾಹಕರೇ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ಲಿನಲ್ಲೇ ಸ್ಕ್ಯಾನರ್ ಮುದ್ರಿಸಲಾಗಿದೆ. ಬಹುತೇಕ ಗ್ರಾಹಕರು ಸ್ಕ್ಯಾನರ್ ಬಳಸಿಯೇ ತಮ್ಮ ಬಿಲ್ಲನ್ನು ಪಾವತಿಸುತ್ತಾರೆ. ಹಾಗಾಗಿ ಹೆಬ್ರಿ ಪಟ್ಟಣದಲ್ಲಿ ಬಿಲ್ ಪಾವತಿಸಲು ಕ್ಯಾಶ್ ಕೌಂಟರ್, ಎಟಿಎಂ ತೆರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರಿಗೆ ಹೆಬ್ರಿ ಮೆಸ್ಕಾಂ ಉಪ ವಿಭಾಗದ ಕಛೇರಿಗೆ ಬರಲು ದೂರವಾಗುತ್ತದೆ. ಕಚೇರಿಯು ಪಟ್ಟದ ಹೊರಗೆ ಇದೆ. ಹೆಬ್ರಿ ಪಟ್ಟಣದಲ್ಲಿ ಬಿಲ್ ಪಾವತಿಸಲು ಕ್ಯಾಶ್ ಕೌಂಟರ್, ಎಟಿಎಂ ತೆರೆಯುವಂತೆ ಹೆಬ್ರಿ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್ ಮನವಿ ಮಾಡಿದರು.
ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ ಸಹಿತ ಹಲವರು ತಮ್ಮ ಸಮಸ್ಯೆಯನ್ನು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ಇಇ ನರಸಿಂಹ, ಹೆಬ್ರಿ ಮೆಸ್ಕಾಂ ಉಪವಿಭಾಗದ ಎಇಇ ನಾಗರಾಜ್, ಶಾಖಾಧಿಕಾರಿಗಳಾದ ಲಕ್ಷ್ಮೀಶ್, ಸಂದೀಪ್, ಎಇ ರಾಧಿಕಾ ಅಡಿಗ, ಹಿರಿಯ ಸಹಾಯಕ ಶಿವಕುಮಾರ್ ಉಪಸ್ಥಿತರಿದ್ದರು.