ಬೊಲಿವಿಯಾದಲ್ಲಿ ಸೇನಾ ವಿಮಾನ ಪತನ : ಹೆದ್ದಾರಿಯಲ್ಲಿ ಸುರಿದ ನೋಟಿನ ಮಳೆ, 15 ಮಂದಿ ಬಲಿ

0
78

ಬೊಲಿವಿಯಾದ ರಾಜಧಾನಿ ಲಾ ಪಾಜ್ ಸಮೀಪದ ಎಲ್ ಆಲ್ಟೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಭೀಕರ ವಿಮಾನ ಅಪಘಾತ ನಡೆದಿದೆ. ಕೇಂದ್ರೀಯ ಬ್ಯಾಂಕ್‌ಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳನ್ನು ಹೊತ್ತು ಸಾಗುತ್ತಿದ್ದ ವಾಯುಪಡೆಯ ‘ಹರ್ಕ್ಯುಲಸ್’ ಸರಕು ಸಾಗಣೆ ವಿಮಾನವು ತಾಂತ್ರಿಕ ದೋಷದಿಂದ ಹೆದ್ದಾರಿಯ ಮೇಲೆ ಪತನಗೊಂಡಿದ್ದು, ಘಟನೆಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.

ವಿಮಾನವು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ನೇರವಾಗಿ ಜನನಿಬಿಡ ಹೆದ್ದಾರಿಯ ಮೇಲೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಸುಮಾರು 15ಕ್ಕೂ ಹೆಚ್ಚು ವಾಹನಗಳು ನಜ್ಜುಗುಜ್ಜಾಗಿದ್ದು, ವಿಮಾನದ ಅಡಿಯಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ. ಮೃತಪಟ್ಟವರಲ್ಲಿ ಎಷ್ಟು ಮಂದಿ ವಿಮಾನದಲ್ಲಿದ್ದರು ಮತ್ತು ಎಷ್ಟು ಮಂದಿ ವಾಹನ ಸವಾರರು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ತೋವರ್ ತಿಳಿಸಿದ್ದಾರೆ.

ವಿಮಾನವು ಪತನಗೊಂಡು ಸ್ಫೋಟಗೊಂಡ ಬೆನ್ನಲ್ಲೇ ಒಂದು ವಿಲಕ್ಷಣ ದೃಶ್ಯ ಕಂಡುಬಂದಿತು. ವಿಮಾನದಲ್ಲಿದ್ದ ಹೊಸ ನೋಟುಗಳ ರಾಶಿ ಗಾಳಿಯಲ್ಲಿ ತೇಲಿ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ಭೀಕರತೆಯ ನಡುವೆಯೂ ಸ್ಥಳೀಯರು ರಕ್ತಸಿಕ್ತ ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಸಂಗ್ರಹಿಸಲು ಮುಗಿಬಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಜನರು ನೋಟುಗಳನ್ನು ಕೈಚೀಲಗಳಿಗೆ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ.

ಅಪಘಾತದ ಬೆನ್ನಲ್ಲೇ ಎಲ್ ಆಲ್ಟೋ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಬೊಲಿವಿಯಾ ಇತಿಹಾಸದಲ್ಲಿ ಇದು ಅತ್ಯಂತ ವಿಲಕ್ಷಣ ಹಾಗೂ ಕರುಣಾಜನಕ ಅಪಘಾತಗಳಲ್ಲಿ ಒಂದೆಂದು ಬಿಂಬಿತವಾಗಿದೆ.

LEAVE A REPLY

Please enter your comment!
Please enter your name here