ಲೋಬೋ ಪ್ರೊಡಕ್ಷನ್ ಹಾಗೂ ವಿಲ್ಸನ್ ಲೋಬೋ ನಿರ್ಮಾಣದ ಬಹುನಿರೀಕ್ಷಿತ ‘ವೇಳ್ ಘಡಿ’ ಕೊಂಕಣಿ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸಚಿವ ಡಾ. ಯು.ಟಿ. ಖಾದರ್ ಫರೀದ್ ನಿವಾಸದಲ್ಲಿ ನಡೆಯಿತು. ಆರೋಗ್ಯ, ಕುಟುಂಬ ಕಲ್ಯಾಣ, ವಕ್ಫ್, ಅಲ್ಪಸಂಖ್ಯಾತರ ಹಾಗೂ ಹಜ್ ಸಚಿವ ಡಾ. ಯು.ಟಿ. ಖಾದರ್ ಅವರು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಚಲನಚಿತ್ರಗಳ ಪಾತ್ರ ಮಹತ್ವದ್ದಾಗಿದೆ. ಸ್ಥಳೀಯ ಭಾಷೆಯ ಚಿತ್ರಗಳು ಜನರ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ. ಇಂತಹ ಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಬೋ ಫೌಂಡೇಶನ್ ಅಧ್ಯಕ್ಷ ಹಾಗೂ ಚಿತ್ರದ ನಿರ್ಮಾಪಕ ಜಾನ್ ವಿಲ್ಸನ್ ಲೋಬೋ ಅವರು ನೂತನವಾಗಿ ಆಯ್ಕೆಯಾದ ಸಚಿವ ಡಾ. ಯು.ಟಿ. ಖಾದರ್ ಫರೀದ್ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ‘ವೇಳ್ ಘಡಿ’ ಕೊಂಕಣಿ ಚಲನಚಿತ್ರದ ಕಥೆಗಾರ ಹಾಗೂ ಸಹನಿರ್ದೇಶಕ ರೋಶನ್ ನೆಲ್ಲಿಗುಡ್ಡೆ, ನಟ ಸುನಿಲ್ ನೆಲ್ಲಿಗುಡ್ಡೆ, ಛಾಯಾಗ್ರಾಹಕ (DOP) ಫೆಸ್ವಿತ್ ಡಿಸೋಜ ಹಾಗೂ ಸಹಾಯಕ ಛಾಯಾಗ್ರಾಹಕ ರಾಯನ್ ಡಿಸೋಜ ಉಪಸ್ಥಿತರಿದ್ದರು.

