ಶ್ರೀ ಮಹಾವೀರ ಕಾಲೇಜು, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ
ಮೂಡುಬಿದಿರೆ : ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಹಾಗೂ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಸಹಯೋಗದಲ್ಲಿ MIT–SMC AI Boot Camp ಉದ್ಘಾಟನಾ ಕಾರ್ಯಕ್ರಮವು ಅಕ್ಟೋಬರ್ 12ರಂದು ಶ್ರೀ ಮಹಾವೀರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹಕುಲಾಧಿಪತಿ ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ. ಎಚ್.ಎಸ್. ಬಲ್ಲಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್., ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಹಾಗೂ ಮೂಡುಬಿದಿರೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅವರು ಸ್ವಾಗತಿಸಿದರು. ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಮೈಂಡ್‌ಫುಲ್ ಕನ್ಸಲ್ಟಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಭಟ್ ಮತ್ತು ಕ್ಲೌಡೆರಾ ಸಂಸ್ಥೆಯ ಪ್ರಧಾನ ಎಂಜಿನಿಯರ್ ವಾದಿರಾಜ್ ಭಟ್ ಅವರು ಆರಂಭಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಎಂಐಟಿ–ಎಸ್‌ಎಂಸಿ ಎಐ ಬೂಟ್‌ಕ್ಯಾಂಪ್ ಹಾಗೂ ಬಿಸಿಎ ಸಲಹಾ ಮಂಡಳಿಗೆ ಚಾಲನೆ ನೀಡಲಾಯಿತು. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕಿ ಡಾ. ಚಿತ್ರಾ ಕೆ. ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಹಾಗೂ ಡೀನ್ ಡಾ. ರಾಧಿಕಾ ಪೈ ಅವರನ್ನು ಗುರುತಿಸಿ ಗೌರವಿಸಲಾಯಿತು.
ನಂತರ ಡಾ. ಎಚ್.ಎಸ್. ಬಲ್ಲಾಳ್ ಅವರು ಉದ್ಘಾಟನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳು ತಮ್ಮ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷೀಯ ಭಾಷಣವನ್ನು ಕೆ. ಅಭಯಚಂದ್ರ ಜೈನ್ ನೆರವೇರಿಸಿದರು. ಬಳಿಕ ಡಾ. ಚಿತ್ರಾ ಕೆ. ಮತ್ತು ಡಾ. ರಾಧಿಕಾ ಪೈ ಅವರಿಂದ ವಿಶೇಷ ಘೋಷಣೆ ಕಾರ್ಯಕ್ರಮ ನಡೆಯಿತು.
ಶ್ರೀ ಮಹಾವೀರ ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥೆ ಪ್ರೊ. ಕೀರ್ತಲಾ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾಲೇಜಿನ ಸಭಾಂಗಣದ ಜೊತೆಗೆ ಗೂಗಲ್ ಮೀಟ್ ಮೂಲಕವೂ ಕಾರ್ಯಕ್ರಮದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹಾಗೂ ತಾಂತ್ರಿಕ ಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

