ತೋನ್ಸೆ ಗ್ರಾಮ ಪಂಚಾಯತ್ ಕಚೇರಿಗೆ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಗ್ರಾಮದ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಕೆಮ್ಮಣ್ಣು ಭಾಗದ ವಿದ್ಯುತ್ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಈಗಾಗಲೇ ಸಬ್ ಸ್ಟೇಷನ್ ಮಂಜೂರಾಗಿದ್ದು ಹಾಗೂ ಸರಕಾರಿ ಜಾಗ ಅಂತಿಮಗೊಳಿಸಿದ ಬಳಿಕ ಸಮಸ್ಯೆ ಪರಿಹರಿಸಲಾಗುವುದು ಅಗತ್ಯ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತುರ್ತು ಸ್ಪಂದಿಸುವಂತೆ ಸೂಚಿಸುವುದಾಗಿ ಶಾಸಕರು ತಿಳಿಸಿದರು.
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಮುಂತಾದ ಪಿಂಚಣಿಗಳು ರದ್ದಾಗಿರುವ ಬಗ್ಗೆ ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದು, ಸಮಸ್ಯೆ ಈವರೆಗೆ ಬಗೆಹರಿದಿರುವುದಿಲ್ಲ. ಈ ಕುರಿತು ಮತ್ತೊಮ್ಮೆ ನಾಡಿದ್ದು ಪ್ರಾರಂಭವಾಗುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕರು ತಿಳಿಸಿದರು.
ಕೆಮ್ಮಣ್ಣಿನ ತಿಮ್ಮಣ್ಣ ಕುದ್ರುವಿನಿಂದ ಹಾರಾಡಿವರೆಗೆ ಸೇತುವೆ ನಿರ್ಮಾಣವಾದಲ್ಲಿ ಬ್ರಹ್ಮಾವರ ತಲುಪುವ ಜನರಿಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ಹೂಡೆ ಭಾಗದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ಗ್ರಾಮ ಪಂಚಾಯತ್ ನಲ್ಲಿ ವಸತಿ ಉದ್ದೇಶಕ್ಕೆ 2250 ಚದರ ಅಡಿಯ ಅನುಮತಿ ಪಡೆದು ಸುಮಾರು 7000 ಚದರ ಅಡಿಯ ಕಟ್ಟಡ ನಿರ್ಮಿಸಿ ದಾರುಸ್ಸುಲ್ ಎಜ್ಯುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಈ ಕಟ್ಟಡದಲ್ಲಿ ನಿಯಮಬಾಹಿರವಾಗಿ ಅಕ್ರಮ ಮದರಸ ನಡೆಸುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ಅಫ್ತಾಬ್ ಆಲಂ
ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಹಲವು ಕಟ್ಟಡಗಳಿಗೂ ನಿಯಮ ಮೀರಿ ಅನುಮತಿ ನೀಡಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ಈ ಕುರಿತು ಸಮಗ್ರ ತನಿಖೆ ನಡೆಸಿ, ಕಾನೂನು ಮೀರಿ ಕೆಲಸ ನಿರ್ವಹಿಸಿದ ಅಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕೆಮ್ಮಣ್ಣಿನಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಂದು
ರಸ್ತೆ ಬದಿ ವಾಹನಗಳ ಪಾರ್ಕಿಂಗ್ ನಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯ ಬಗ್ಗೆ ಆಗತ್ಯ ಕ್ರಮ ವಹಿಸುವಂತೆ ಶಾಸಕರು ಪೋಲಿಸ್ ಇಲಾಖೆಗೆ ಸೂಚಿಸಿ ಪ್ರತಿ ಗುರುವಾರ ಸದ್ರಿ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ತಿಳಿಸಿದರು.
ಸಭೆಯಲ್ಲಿ ಉಡುಪಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ವಿಜಯ, ಮಲ್ಪೆ ವೃತ್ತದ ಪೋಲಿಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್, ಕೆಮ್ಮಣ್ಣು ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾದ ಶ್ರೀಮತಿ ಅನುಷಾ, ಉಡುಪಿ ನಗರ ಪ್ರಾಧಿಕಾರದ ನಗರ ಯೋಜನಾ ಸದಸ್ಯರಾದ ಶ್ರೀ ಸಚಿನ್, ಮಲ್ಪೆ ಠಾಣೆಯ ಉಪನಿರೀಕ್ಷಕರಾದ ಶ್ರೀ ಅನಿಲ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿಯ ನಿಕಟ ಪೂರ್ವ ಸದಸ್ಯರುಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

