ಅ.16 -17ರಂದು ಮೂಡುಬಿದಿರೆ ದಸರಾ ವೈಭವ

0
14

ಪೊನ್ನೆಚ್ಚಾರಿ ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ

ಮೂಡುಬಿದಿರೆ : ಪೊನ್ನೆಚ್ಚಾರಿ ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಎರಡು ದಿನಗಳ ಶ್ರೀ ಶಾರದಾ ಪೂಜಾ ಮಹೋತ್ಸವವು ಅಕ್ಟೋಬರ್ 16 ಮತ್ತು 17ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅಕ್ಟೋಬರ್ 16ರಂದು ಬೆಳಿಗ್ಗೆ 7ಕ್ಕೆ ಗಣಹೋಮ ಹಾಗೂ ಬೆಳಿಗ್ಗೆ 9ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಇದೇ ವೇಳೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ‘ನನ್ನ ಕನಸಿನ ಶಾಲೆ’, ‘ಹಳ್ಳಿ ಜೀವನ’ ಹಾಗೂ ‘ವೀಣಾಧಾರಿಣಿ ಶಾರದೆ’ ವಿಷಯಗಳನ್ನು ನೀಡಲಾಗಿದೆ. ಬೆಳಿಗ್ಗೆ 9ಕ್ಕೆ ಅಕ್ಷರಾಭ್ಯಾಸ ಹಾಗೂ ಭಕ್ತಿಗೀತೆ ಸ್ಪರ್ಧೆಯೂ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ರಂಗಪೂಜೆ ಹಾಗೂ ಮಹಾಪೂಜೆ, ಮಧ್ಯಾಹ್ನ 1ರಿಂದ 3ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಗುಂಪು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 4ರಿಂದ 5ರವರೆಗೆ ಶ್ರೀ ಅಕ್ಕಿ ವೆಂಕಟರಮಣ ಭಜನಾ ಮಂಡಳಿ, ಪೊನ್ನೆಬಾಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ರಿಂದ ರಾತ್ರಿ 8.30ರವರೆಗೆ ಟ್ವಿಸ್ಟರ್ಸ್ ಡ್ಯಾನ್ಸ್ ಅಕಾಡೆಮಿ, ಮೂಡುಬಿದಿರೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 17ರಂದು ಬೆಳಿಗ್ಗೆ 8ಕ್ಕೆ ಸುಪ್ರಭಾತ, ಶ್ರೀ ದೇವಿಗೆ ವಿಶೇಷ ಅಲಂಕಾರ, ಸ್ತೋತ್ರ ಪಠಣ ಹಾಗೂ ಪೂಜೆ ನಡೆಯಲಿದೆ. ಬೆಳಿಗ್ಗೆ 9.30ರಿಂದ ಲೋಕಕಲ್ಯಾಣಾರ್ಥವಾಗಿ ಶ್ರೀ ಪಂಚದುರ್ಗಾ ಹವನ ನಡೆಯಲಿದ್ದು, ಬೆಳಿಗ್ಗೆ 10ಕ್ಕೆ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಮುದ್ದು ಶಾರದೆ ಸ್ಪರ್ಧೆ ಹಾಗೂ 11.30ಕ್ಕೆ ಅಕ್ಷರಾಭ್ಯಾಸ ಮತ್ತು ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ರಂಗಪೂಜೆ ಹಾಗೂ ಮಹಾಪೂಜೆ, ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು 2ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. ಸಂಜೆ 3.45ರಿಂದ 5ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5ಕ್ಕೆ ಬಹುಮಾನ ವಿತರಣಾ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಸಂಜೆ 6ಕ್ಕೆ ಪೂಜೆ ನೆರವೇರಿದ ಬಳಿಕ ವೈಭವದ ಶೋಭಾಯಾತ್ರೆ ನಡೆಯಲಿದ್ದು, ರಾತ್ರಿ 10.30ಕ್ಕೆ ಶ್ರೀ ದೇವಿಯ ವಿಗ್ರಹವನ್ನು ಜಲಸ್ತಂಭನಗೊಳಿಸುವ ಮೂಲಕ ಎರಡು ದಿನಗಳ ಶಾರದಾ ಪೂಜಾ ಮಹೋತ್ಸವ ಸಮಾಪ್ತಿಗೊಳ್ಳಲಿದೆ.