ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಮೂಲದ ಶ್ರೀ ಮಲ್ಲಾರ್ ಶಶಿಧರ ಶೆಟ್ಟಿ ಅವರು ಖ್ಯಾತ ಉದ್ಯಮಿ, ಸಮಾಜಸೇವಕ ಹಾಗೂ ಭಾರತೀಯ ಸಂಸ್ಕೃತಿಯ ಪ್ರಚಾರಕರಾಗಿದ್ದಾರೆ. ವಾಣಿಜ್ಯ ಪದವೀಧರರಾಗಿರುವ ಅವರು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, ಒಮಾನ್‌ನ Abeer Group of Companies ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ಐದು ದಶಕಗಳಿಂದ ಸಮಾಜಸೇವೆ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಹಾದೇವಿ ಕಲ್ಚರಲ್ ಕ್ಲಬ್, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ – ಮಸ್ಕತ್, ಅಧ್ಯಾತ್ಮಿಕ ಸಮಿತಿ, ಬಾಲಭಾರತಿ ಸ್ಟಡಿ ಸೆಂಟರ್ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಭಾರತೀಯ ಪ್ರವಾಸಿ ಮಂಚ್–ಕರ್ನಾಟಕ ಘಟಕದ ಅಧ್ಯಕ್ಷರು, ಒಮಾನ್ ಬಂಟ್ಸ್ ಸಂಘದ ಸಂಸ್ಥಾಪಕ ಸದಸ್ಯರು, ತುಳು ಕೂಟ ಮಸ್ಕತ್‌ನ ಸಂಸ್ಥಾಪಕ ಸದಸ್ಯರು ಹಾಗೂ ಒಮಾನ್‌ನಲ್ಲಿ ತುಳು ಲಿಪಿಯ ಪ್ರಚಾರ ಮತ್ತು ಬೋಧನೆಗೆ ಮಾರ್ಗದರ್ಶಕರಾಗಿದ್ದಾರೆ.
ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವು, ಮೃತ ಭಾರತೀಯರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ, ನಿರುದ್ಯೋಗಿಗಳಿಗೆ ಸಹಾಯ, ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಉದಾರ ಕೊಡುಗೆ ನೀಡುವ ಮೂಲಕ ಅವರು ಅಪೂರ್ವ ಸಮಾಜಸೇವೆ ಸಲ್ಲಿಸಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಮಾಜಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಅವರಿಗೆ “ವಿಶ್ವ ಮಾನ್ಯ ಕನ್ನಡಿಗ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಅವರ ಸಮಾಜಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ತುಳು-ಕನ್ನಡ ಭಾಷೆ, ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳ ಪ್ರಸಾರಕ್ಕೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ಶ್ರೀ ಮಲ್ಲಾರ್ ಶಶಿಧರ ಶೆಟ್ಟಿಯವರನ್ನು ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಒಮಾನ್ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.
ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ಶ್ರೀ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆಯ ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ ಮತ್ತು ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಶ್ರೀ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಅಧ್ಯಕ್ಷರಾದ ಶ್ರೀ ಮಲ್ಲಾರ್ ಶಶಿಧರ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.

