ಮುಲ್ಕಿ : ಏಳು ತುಳುನಾಡಿನ ಸಾಧಕಿಯರಿಗೆ “ತುಳುಅಪ್ಪೆ ಸಿರಿ ಪ್ರಶಸ್ತಿ”

0
3

ಮೇ 24ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆಯುವ “ಅಪ್ಪೆ ಬೇರ್ ದ ತುಳುನಾಡ್” ಕಾರ್ಯಕ್ರಮದಲ್ಲಿ ಗೌರವ

ಮುಲ್ಕಿ: ತುಳುನಾಡಿನ ಮಾತೃಮೂಲ ಸಂಸ್ಕೃತಿ, ಮಹಿಳಾ ಶಕ್ತಿ, ಸಮಾಜಮುಖಿ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ “ಅಪ್ಪೆ ಬೇರ್ ದ ತುಳುನಾಡ್ – ರಾಷ್ಟ್ರೀಯ ತುಳು ವಿಚಾರಗೋಷ್ಠಿ” ಕಾರ್ಯಕ್ರಮದ ಅಂಗವಾಗಿ ಹೇಳು ಮಂದಿ ಸಾಧಕೇರಿಗೆ “ತುಳುಅಪ್ಪೆ ಸಿರಿ ಪ್ರಶಸ್ತಿ” ಪ್ರದಾನ ಮಾಡಲಾಗುವುದು.

ಮೇ 24ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ತುಳುನಾಡಿನ ಮಾತೃಮೂಲ ಸಂಸ್ಕೃತಿ, ತುಳು ಭಾಷೆ, ಪರಂಪರೆ, ಮಹಿಳಾ ನಾಯಕತ್ವ ಹಾಗೂ ಸಾಮಾಜಿಕ ಏಕತೆಯ ಸಂದೇಶವನ್ನು ಸಾರುವ ವಿಶಿಷ್ಟ ವೇದಿಕೆಯಾಗಲಿದೆ.

ಕಾರ್ಯಕ್ರಮದ ಅಂಗವಾಗಿ ಮಾತೃಮೂಲ ಸಂಸ್ಕೃತಿ, ತಾಯಿ ಮೂಲದ ತತ್ವ, ಅಲಿಯಸಂತಾನ ಪದ್ಧತಿ, ತುಳು ಭಾಷೆಯ ಭವಿಷ್ಯ, ಮಹಿಳಾ ನಾಯಕತ್ವ ಹಾಗೂ ತುಳುನಾಡಿನ ಸಾಂಸ್ಕೃತಿಕ ಪುನರುಜ್ಜೀವನ ಕುರಿತ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಮತ್ತು ವಿಶೇಷ ಪ್ರಬಂಧ ಮಂಡನೆ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಸಂಶೋಧಕರು, ಸಾಹಿತಿಗಳು, ಕಲಾವಿದರು ಹಾಗೂ ಸಮಾಜಮುಖಿ ನಾಯಕರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ “ತುಳುಅಪ್ಪೆ ಸಿರಿ ಪ್ರಶಸ್ತಿ”ಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಹಾಗೂ ಸಮಾಜಮುಖಿ ಸೇವೆ ಸಲ್ಲಿಸಿರುವ ಏಳು ಗಣ್ಯ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರು : ಚಂದ್ರಿಕಾ ಹರೀಶ್ ಶೆಟ್ಟಿ – ಉದ್ಯಮ ಮತ್ತು ಸಮಾಜ ಸೇವೆ, ಸಿಂಧು ಗುಜರನ್ – ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸರೋಜಿನಿ ಸುವರ್ಣ – ಕೃಷಿ ಮತ್ತು ಸಮಾಜ ಸೇವೆ, ಜಯಂತಿ ಬಂಗೇರ – ಸಾಹಿತ್ಯ ಕ್ಷೇತ್ರ , ಸಾವಿತ್ರಿ ಶೆಟ್ಟಿ – ಮಹಿಳಾ ಸಬಲೀಕರಣ ಕ್ಷೇತ್ರ , ಕಸ್ತೂರಿ ಪಂಜ – ರಾಜಕೀಯ ಕ್ಷೇತ್ರ , ಸುನಂದ ಎಂ. ಅಮೀನ್ – ಕುಲ ಕಸುಬು ಮತ್ತು ಪರಂಪರೆ ಸಂರಕ್ಷಣೆ ಕ್ಷೇತ್ರ.

ತುಳುನಾಡಿನ ತಾಯಿ ಸಂಸ್ಕೃತಿ, ಸೇವೆ, ಸಾಧನೆ ಹಾಗೂ ಸಾಮಾಜಿಕ ನಾಯಕತ್ವದ ಪ್ರತೀಕವಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಮಹಿಳೆಯರ ಸಾಧನೆಯನ್ನು ಗುರುತಿಸಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸಂಘಟಕಿ ಭಾನುಮತಿ ಶೆಟ್ಟಿ ಕಕ್ವಗುತ್ತು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಸಮುದಾಯಗಳ ಮುಖಂಡರು, ಸಾಹಿತಿಗಳು, ಕಲಾವಿದರು, ಸಂಶೋಧಕರು, ಮಹಿಳಾ ಪ್ರತಿನಿಧಿಗಳು ಹಾಗೂ ದೇಶ-ವಿದೇಶಗಳಲ್ಲಿ ನೆಲೆಸಿರುವ ತುಳುವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here