ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಮುಂಬಯಿ ಉದ್ಯಮಿ, ಕಲಾಪೋಷಕ ವೇಣುಗೋಪಾಲ ಎಲ್.ಶೆಟ್ಟಿ ಆಯ್ಕೆ

0
16

ನ.22ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರು : ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಯಕ್ಷಗಾನ ಕಲಾಪೋಷಕರಿಗಾಗಿ ನೀಡುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಈ ಬಾರಿ ಮುಂಬೈಯ ಖ್ಯಾತ ಹೋಟೇಲ್ ಉದ್ಯಮಿ ಮತ್ತು ಕಲಾಪೋಷಕ ವೇಣುಗೋಪಾಲ ಎಲ್. ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಇದೇ ನವೆಂಬರ 22 ರಿಂದ 28ರ ವರೆಗೆ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2026’ ಹದಿನಾಲ್ಕನೇ ವರ್ಷದ ನುಡಿ ಹಬ್ಬದಲ್ಲಿ ಈ ಗೌರವ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.

ವೇಣುಗೋಪಾಲ ಎಲ್.ಶೆಟ್ಟಿ

ಮುಂಬೈ ಮಹಾನಗರದ ಯಶಸ್ವೀ ಉದ್ಯಮಿ, ಸಂಘಟಕ ಮತ್ತು ಸಮಾಜಸೇವಕರಾದ ವೇಣುಗೋಪಾಲ್ ಎಲ್.ಶೆಟ್ಟಿ ಅವರು ಓರ್ವ ಸಹೃದಯಿ ಕಲಾಪೋಷಕರು. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಸಮೀಪದ ಕರಂಬಾರು ಪಡುಮನೆಯಲ್ಲಿ ಲಕ್ಕಪ್ಪ ಶೆಟ್ಟಿ ಕುಕ್ಕಾಜೆ ಮತ್ತು ಕೆಂಜಾರು ಪೆರ್ಲ ರತ್ನಾ ಶೆಟ್ಟಿ ದಂಪತಿಯ ಪುತ್ರನಾಗಿ ಜುಲೈ 24,1964 ರಲ್ಲಿ ಜನಿಸಿದ ಅವರು ಕರಂಬಾರು ಮತ್ತು ಬೊಂದೇಲ್ ಗಳಲ್ಲಿ ಎಂಟನೇ ತರಗತಿವರೆಗೆ ಕಲಿತು 1978ರಲ್ಲಿ ಮುಂಬೈ ನಗರವನ್ನು ಸೇರಿದರು.

ಥಾಣೆಯಲ್ಲಿ ತಮ್ಮ ಚಿಕ್ಕಪ್ಪನ ಕ್ಯಾಂಟೀನೊಂದರಲ್ಲಿ ಉದ್ಯೋಗಿಯಾಗಿ ಸೇರಿ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ಮತ್ತು ಸಿದ್ದಾರ್ಥ ಕಾಲೇಜು ಘಾಟ್ ಕೋಪರ್ ಗಳಲ್ಲಿ ರಾತ್ರಿ ಶಾಲೆ ಕಲಿತು ಬಿ.ಕಾಂ. ಪದವೀಧರರಾದರು. ಬಳಿಕ ಆರು ತಿಂಗಳು ಸೌದಿ ಅರೇಬಿಯಾದಲ್ಲಿದ್ದು ಮರಳಿ, ಮುಂಬೈಯ ಭಾಂಡೂಪ್ ನಲ್ಲಿ ಹೋಟೇಲ್ ಉದ್ಯಮಕ್ಕೆ ಪದಾರ್ಪಣೆ ಮಾಡಿದರು. ಸತತ ಪರಿಶ್ರಮದಿಂದ ಥಾಣೆ, ಭಿವಂಡಿ, ಕಲ್ಯಾಣ್ ಮಾತ್ರವಲ್ಲದೆ ಹುಟ್ಟೂರು ಮಂಗಳೂರಿನ ಸುರತ್ಕಲ್ ಮತ್ತು ದೇರಳಕಟ್ಟೆಗಳಲ್ಲೂ ಸ್ವಂತ ಹೋಟೆಲ್ ಗಳನ್ನು ಪ್ರಾರಂಭಿಸಿದರು. ಜೊತೆಗೆ ಪ್ರಸ್ತುತ ಗುಜರಾತ್ ನಲ್ಲಿ ಹಲವು ಕಂಪೆನಿಗಳ ಕ್ಯಾಂಟೀನ್ ಗಳನ್ನು ನಡೆಸುತ್ತಿದ್ದಾರೆ.

ವೇಣುಗೋಪಾಲ್ ಶೆಟ್ಟಿಯವರು ಥಾಣೆ ಬಂಟ್ಸ್ ಅಸೋಸಿಯೇಶನ್ ನ ಪದಾಧಿಕಾರಿಯಾಗಿ19 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2019 – 2022ರ ಸಾಲಿಗೆ ಅಧ್ಯಕ್ಷರಾಗಿ ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳ ದತ್ತು ಸ್ವೀಕಾರ, ಹೆಣ್ಣು ಮಕ್ಕಳ ಮದುವೆಗೆ ನೆರವು, ಅಶಕ್ತರಿಗೆ – ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಹಾಯ, ನೂರಾರು ದೈವಸ್ಥಾನ – ದೇವಸ್ಥಾನಗಳ ಅಭಿವೃದ್ಧಿಗೆ ಧನಸಹಾಯ, ಕಲಾವಿದರು ಮತ್ತು ಕಲಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ.. ಇತ್ಯಾದಿಗಳನ್ನು ಜಾತಿ ಮತ ಭೇದವಿಲ್ಲದೆ ಮಾಡುತ್ತಿರುವುದು ಅವರ ಔದಾರ್ಯಕ್ಕೆ ಸಾಕ್ಷಿ.

ಬಜಪೆ ಕರಂಬಾರು ಮಹಾಮಾಯಿ ಕೋಟೆ ಬಬ್ಬು ಸ್ವಾಮಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ, ಶ್ರೀದೇವಿ ಭಜನಾ ಮಂಡಳಿ ಕರಂಬಾರು ಕೆಂಜಾರು ಇದರ ಗೌರವಾಧ್ಯಕ್ಷರಾಗಿ, ಹುಟ್ಟೂರು ಮತ್ತು ಮುಂಬೈಯ ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿರುವ ವೇಣುಗೋಪಾಲ್ ಎಲ್. ಶೆಟ್ಟಿಯವರು ಪ್ರಸ್ತುತ ಬಜಪೆ ಬಂಟರ ಸಂಘದ ದಕ್ಷ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಸಮಾಜ ಸೇವೆಗಾಗಿ 2019ರಲ್ಲಿ ಕೇಂದ್ರ ಸಚಿವಾಲಯದಿಂದ ಭಾರತರತ್ನ ಎ.ಪಿ.ಜೆ.ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಸ್ಥಾನಿಕ ಸಂಘ ಸಂಸ್ಥೆಗಳಿಂದ ಅವರು ಸನ್ಮಾನಿತರಾಗಿದ್ದಾರೆ.

ಧರ್ಮಪತ್ನಿ ಶಿಲ್ಪಾವಿ. ಶೆಟ್ಟಿ, ಅವಳಿ ಮಕ್ಕಳಾದ ಆರ್ಕಿಟೆಕ್ಟ್ ವಿಭಾ ವಿ. ಶೆಟ್ಟಿ (ಅಳಿಯ ರಾಕೇಶ್ ಶೆಟ್ಟಿ), ಡಾ. ವೀಕ್ಷಾ ವಿ. ಶೆಟ್ಟಿ (ಅಳಿಯ ಡಾ. ಮಂಜುನಾಥ್) ಮತ್ತು ವೈಷ್ಣವಿ ಶೆಟ್ಟಿಯವರನ್ನು ಒಳಗೊಂಡ ಸಂತೃಪ್ತ ಸಂಸಾರ ಅವರದು. ತಮ್ಮ 18 ಉದ್ಯಮ ಸಂಸ್ಥೆಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿರುವ ವೇಣುಗೋಪಾಲ್ ಶೆಟ್ಟರು ನೂರಾರು ಕುಟುಂಬಗಳಿಗೆ ಆಶ್ರಯದಾತರು ಎನಿಸಿಕೊಂಡಿದ್ದಾರೆ.

ಪ್ರಶಸ್ತಿ ಪ್ರದಾನ

ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ನವೆಂಬರ್ 22ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ‘ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ’ವಾಗಿ ಜರಗುವ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಪಿ.ಎಲ್.ಧರ್ಮ ಅವರು ಉದ್ಘಾಟಿಸಲಿದ್ದು, ಯಕ್ಷಾಂಗಣದ ಗೌರವಾಧ್ಯಕ್ಷ ಡಾ| ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು.

ಈ ಸಂದರ್ಭದಲ್ಲಿ ಏರ್ಪಡಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿವೃತ್ತ ಭಾರತೀಯ ಸೇನಾನಿ ಕ್ಯಾಪ್ಟನ್ ಶರತ್ ಭಂಡಾರಿ ಅವರು ವೇಣುಗೋಪಾಲ್ ಎಲ್.ಶೆಟ್ಟಿಯವರಿಗೆ 2026ನೇ ಸಾಲಿನ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಲಿದ್ದಾರೆ. ಬಳಿಕ ಸಪ್ತಾಹದ ಪ್ರಥಮ ದಿನದ ಕಾರ್ಯಕ್ರಮ ‘ಚಂದ್ರ ವಂಶೋದಯ’ ಯಕ್ಷಗಾನ ತಾಳಮದ್ದಳೆ ಜರಗುವುದೆಂದು ಯಕ್ಷಾಂಗಣದ ಪ್ರಕಟಣೆ ತಿಳಿಸಿದೆ.