ಮುಂಬಯಿ ಯಕ್ಷಗಾನ ಸಮ್ಮೇಳನ – 2026: ಸಮ್ಮೇಳನಾಧ್ಯಕ್ಷರಾಗಿ ಡಾ| ಟಿ.ಶ್ಯಾಮ ಭಟ್ ಆಯ್ಕೆ

0
9

ಅಜೆಕಾರು ಕಲಾಭಿಮಾನಿ ಬಳಗದಿಂದ ಅಧಿಕೃತ ಘೋಷಣೆ

ಮಂಗಳೂರು: ಯಕ್ಷಗಾನ ಕಲೆಯ ಮಹಾಪೋಷಕ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಟಿ.ಶ್ಯಾಮ ಭಟ್ ಮುಂಬಯಿ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗವು ತನ್ನ ರಜತ ವರ್ಷದ ಅಂಗವಾಗಿ 2026 ಅಕ್ಟೋಬರ್ 3 ಮತ್ತು 4ರಂದು ಮುಂಬೈ ಬಂಟರ ಭವನದಲ್ಲಿ ಎರಡು ದಿನಗಳ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸಿದೆ. ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ನಿಯೋಗವು ಡಾ.ಶ್ಯಾಮ ಭಟ್ ಅವರನ್ನು ಮಂಗಳೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭೇಟಿಯಾಗಿ ಅವರಿಗೆ ಅಧಿಕೃತ ಆಹ್ವಾನ ನೀಡಿತು.

ಸಮ್ಮೇಳನ ಸಮಿತಿಯ ಪ್ರಧಾನ ಸಲಹೆಗಾರರಾದ ಯಕ್ಷಗಾನ ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿ ಅವರು ಈ ಸಂದರ್ಭದಲ್ಲಿ ಶ್ಯಾಮ ಭಟ್ಟರನ್ನು ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಪ್ರಧಾನ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಎರಡು ದಿನ ನಡೆಯಲಿರುವ ವಿವಿಧ ಗೋಷ್ಠಿಗಳು ಮತ್ತು ಯಕ್ಷಗಾನ ಪ್ರದರ್ಶನ – ಪ್ರಾತ್ಯಕ್ಷಿಕೆಗಳ ಬಗ್ಗೆ ವಿವರಿಸಿದರು.

ಎಳೆಯರಲ್ಲಿ ಯಕ್ಷಗಾನ ಜಾಗೃತಿ: ಶ್ಯಾಮ ಭಟ್

ಗೌರವ ಸ್ವೀಕರಿಸಿ ಮಾತನಾಡಿದ ಡಾ|ಟಿ.ಶ್ಯಾಮ ಭಟ್ ‘ಮುಂಬೈಯಲ್ಲಿ ಬಹು ವರ್ಷಗಳ ಬಳಿಕ ಬೃಹತ್ ಯಕ್ಷಗಾನ ಸಮ್ಮೇಳನ ಆಗುತ್ತಿರುವುದು ಸ್ವಾಗತಾರ್ಹ. ತಾನು ಯಕ್ಷಗಾನದ ವಿದ್ವಾಂಸನಲ್ಲದಿದ್ದರೂ ಅದರ ಬಗ್ಗೆ ಪ್ರೀತಿ, ಅಭಿಮಾನದಿಂದ ಕೈಲಾದ ಸೇವೆ ಮಾಡುತ್ತಿದ್ದೇನೆ. ಮುಂಬೈಯ ವಿವಿಧ ಕಡೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿ ಹಲವಾರು ಉತ್ಸಾಹೀ ಕಲಾವಿದರನ್ನು ರೂಪಿಸಿರುವ ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಚಟುವಟಿಕೆಗಳಿಗೆ ಬೆಂಬಲವಾಗಿ ಈ ಹೊಣೆಯನ್ನು ವಹಿಸಿಕೊಳ್ಳುವೆ. ಎಳೆಯರಲ್ಲಿ ಯಕ್ಷಗಾನ ಜಾಗೃತಿಯನ್ನು ಮೂಡಿಸಿ ಮುಂದಿನ ತಲೆಮಾರು ಈ ಕಲೆಯನ್ನು ಪೋಷಿಸಿ, ವಿಸ್ತರಿಸುವ ನಿಟ್ಟಿನಲ್ಲಿ ಸಮ್ಮೇಳನ ಯಶಸ್ವಿಯಾಗಲಿ’ ಎಂದು ನುಡಿದರು.

ಹನುಮಗಿರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಬಂಧಕ ಹರೀಶ ಭಟ್ ಬಳಂತಿಮೊಗರು ಮತ್ತು ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

—— ಡಾ|ಟಿ.ಶ್ಯಾಮ ಭಟ್ ——–

ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪ್ರತಿಷ್ಠಿತ ಕೃಷಿಕ ಕುಟುಂಬದಲ್ಲಿ ಜನಿಸಿರುವ ಡಾ| ಶ್ಯಾಮ ಭಟ್ಟರು ಯಕ್ಷಗಾನದ ಹಿನ್ನೆಲೆಯುಳ್ಳವರು. ಕಲೆ ಮತ್ತು ಕಲಾವಿದರ ಏಳ್ಗೆಗಾಗಿ ಸದಾ ತುಡಿಯುವ ಉದಾರಿ ಹಾಗೂ ಕೊಡುಗೈ ದಾನಿ. ಸರಕಾರಿ ಸೇವೆಯಲ್ಲಿದ್ದು ಅದರೊಂದಿಗೆ ಯಕ್ಷಗಾನ ಸೇವೆಯಲ್ಲೂ ನಿರಂತರವಾಗಿ ತೊಡಗಿಕೊಂಡಿರುವುದು ಅವರ ವಿಶೇಷತೆ.

1992ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಶ್ಯಾಮ ಭಟ್ 2002ರಲ್ಲಿ ಸಾರಿಗೆ ಇಲಾಖೆ ಅಂಡರ್ ಸೆಕ್ರೆಟರಿ ಆಗಿ, ನಂತರ ಪಂಚಾಯತ್ ರಾಜ್, ಮುಜರಾಯಿ ಇಲಾಖೆಗಳಲ್ಲಿ ಉಪ ಆಯುಕ್ತರಾಗಿ, ಉಡುಪಿ ಮತ್ತು ಬೀದರ್ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷರಾಗಿ, ಕೆಪಿಎಸ್ಸಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಿವೃತ್ತರಾದ ಬಳಿಕ ಪ್ರಸ್ತುತ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಕ್ಷಗಾನ ಸಂಘಟನೆ ಹಾಗೂ ವೃತ್ತಿ ಮೇಳಗಳ ಸಂಚಾಲಕರಾಗಿ ಶ್ಯಾಮ ಭಟ್ ಅವರದು ಗಣನೀಯ ಸಾಧನೆ. ಹೊಸನಗರ, ಎಡನೀರು ಮೊದಲಾದ ಮೇಳಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅವರು ಕಳೆದ ಹಲವು ವರ್ಷಗಳಿಂದ ತೆಂಕುತಿಟ್ಟಿನ ಅತ್ಯಂತ ಯಶಸ್ವಿ ತಂಡವೆನಿಸಿದ ಹನುಮಗಿರಿ ಮೇಳದ ವ್ಯವಸ್ಥಾಪಕರಾಗಿದ್ದಾರೆ. ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಸ್ಮಾರಕ ಪ್ರತಿಷ್ಠಾನದ ಮೂಲಕ ಪ್ರತಿ ವರ್ಷ ‘ಸಂಪಾಜೆ ಯಕ್ಷೋತ್ಸವ’ ವನ್ನು ಅದ್ದೂರಿಯಾಗಿ ನಡೆಸುವುದರೊಂದಿಗೆ ಅಹೋರಾತ್ರಿ ಯಕ್ಷಗಾನ ಬಯಲಾಟ ಮತ್ತು ಕಲಾವಿದರ ಸಂಮಾನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ.

ನೂರಾರು ಮಂದಿ ಯಕ್ಷಗಾನ ಕಲಾವಿದರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಆರ್ಥಿಕವಾದ ಶಕ್ತಿ ತುಂಬುತ್ತಿರುವ ಡಾ‌. ಶ್ಯಾಮ ಭಟ್ಟರು ‘ಕಲಾವಿದರ ಕಾಮಧೇನು’ ಎಂದೇ ಜನಪ್ರಿಯರಾಗಿದ್ದಾರೆ. ಇದೀಗ ಮುಂಬಯಿ ಯಕ್ಷಗಾನ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಅವರನ್ನು ಆಯ್ಕೆ ಮಾಡಿರುವುದು ಅದ್ವಿತೀಯ ಕಲಾಪೋಷಕರೊಬ್ಬರಿಗೆ ಲಭಿಸಿರುವ ಅತ್ಯಂತ ಸೂಕ್ತ ಗೌರವವಾಗಿದೆ.

LEAVE A REPLY

Please enter your comment!
Please enter your name here