ಮೈಯುಪಿಐ: ಸಂವಾದಾತ್ಮಕ ಎಐ ಸಹಾಯಕ ಆರಂಭ

0
10

ಮಂಗಳೂರು : ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಗಸಂಸ್ಥೆಯಾದ ಎನ್‍ಪಿಸಿಐ ಭೀಮ್ ಸರ್ವೀಸಸ್ ಲಿಮಿಟೆಡ್ (ಎನ್‍ಬಿಎಸ್‍ಎಲ್), ಭೀಮ್ ಪೇಮೆಂಟ್ಸ್ ಆ್ಯಪ್‍ನಲ್ಲಿ ‘ಮೈಯುಪಿಐ’ ಎಂಬ ಸಂವಾದಾತ್ಮಕ ಎಐ ಸಹಾಯಕವನ್ನು ಪರಿಚಯಿಸಿದೆ.

ಭೀಮ್ ಬಳಕೆದಾರರು ಮೈಯುಪಿಐ ಮೂಲಕ ತಮ್ಮ ಯುಪಿಐ ಸಂಬಂಧಿತ ಅಗತ್ಯತೆಗಳಿಗೆ ಸರಳ, 24/7. ಬಹುಭಾಷಾ ಸಹಾಯ ಪಡೆಯಬಹುದಾಗಿದೆ ಎಂದು ಎನ್‍ಬಿಎಸ್‍ಎಲ್ ಎಂಡಿ ಮತ್ತು ಸಿಇಓ ಲಲಿತಾ ನಟರಾಜ್ ಹೇಳಿದ್ದಾರೆ.

ಈ ಕ್ರಮದಿಂದ ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುರಕ್ಷಿತ, ಅನುಕೂಲಕರ ಮತ್ತು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಬಳಕೆದಾರರು ವಹಿವಾಟು ಇತಿಹಾಸ ವೀಕ್ಷಿಸುವುದು, ದೂರು ದಾಖಲಿಸಿ ಅದರ ಸ್ಥಿತಿಯ ಅನುಸರಣೆ ಮಾಡುವುದು, ಯುಪಿಐ ಮೂಲಕ ಹೊಂದಿಸಿರುವ ಮ್ಯಾಂಡೇಟ್‍ಗಳನ್ನು ವೀಕ್ಷಿಸಿ ನಿರ್ವಹಿಸುವುದು, ಮೊಬೈಲ್ ಸಂಖ್ಯೆಯನ್ನು ಡಿ-ಲಿಂಕ್ ಮಾಡುವುದು ಹಾಗೂ ಯುಪಿಐ ವಂಚನೆಗಳ ಕುರಿತು ಅರಿವು ಮತ್ತು ಸಹಾಯ ಪಡೆಯುವುದು ಸೇರಿದಂತೆ ಹಲವು ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ವಿವರಿಸಿದ್ದಾರೆ.

ಭೀಮ್ ಪೇಮೆಂಟ್ಸ್ ಆ್ಯಪ್‍ನ ಕ್ವಿನ್ ಆ್ಯಕ್ಷನ್ ವಿಭಾಗದಲ್ಲಿ ಮೈಯುಪಿಐ ಲಭ್ಯವಿದೆ. ಸದ್ಯಕ್ಕೆ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮತ್ತು ಬಂಗಾಳಿ ಭಾಷೆಯಲ್ಲಿ ಲಭ್ಯವಿದ್ದು, ಇತರ ಪ್ರಾದೇಶಿಕ ಭಾಷೆಗಳನ್ನು ಸದ್ಯದಲ್ಲೇ ಸೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.