ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ದೂರಮಾಡಿ, ಸಮಾನತೆಯ ಸಮಾಜವನ್ನು ನಿರ್ಮಿಸುವುದೇ ನಾರಾಯಣ ಗುರುಗಳ ಆಶಯ – ಲೋಹಿತ್ ಕನಪಾದೆ

0
6

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 86

ಬಂಟ್ವಾಳ : ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ದೂರಮಾಡಿ, ಜಾತಿ-ಮತಗಳ ಭೇದಭಾವವಿಲ್ಲದ ಸಮಾನತೆಯ ಸಮಾಜವನ್ನು ನಿರ್ಮಿಸುವುದೇ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯವಾಗಿತ್ತು. ಗುರುಗಳ ತತ್ವಾದರ್ಶಗಳು ಕೇವಲ ಉಪದೇಶಗಳಿಗೆ ಸೀಮಿತವಾಗದೆ, ನಮ್ಮ ಬದುಕಿನ ನಡವಳಿಕೆ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಪ್ರತಿಫಲಿಸಬೇಕು ಎಂದು ಆಳ್ವಾಸ್ ಕಾಲೇಜಿನ ಮನೋರೋಗ ವಿಭಾಗದ ಆಪ್ತ ಸಮಾಲೋಚಕರಾದ ಲೋಹಿತ್ ಕನಪಾದೆ ಹೇಳಿದರು.

ಅವರು ನವೆಂಬರ್ 13ರಂದು ಅಲೆಪ್ಪಾಡಿ ಕೊಡಂಬೆಟ್ಟು ಗ್ರಾಮದ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ – 86 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.

ಮನುಷ್ಯನ ಬದುಕಿನಲ್ಲಿ ಜ್ಞಾನ, ವಿವೇಕ ಮತ್ತು ಮಾನವೀಯ ಮೌಲ್ಯಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಪರಸ್ಪರ ಗೌರವ, ಪ್ರೀತಿ, ಸಹಬಾಳ್ವೆ ಹಾಗೂ ಸಮಾನತೆಯ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯ. ನಾರಾಯಣ ಗುರುಗಳ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂಬ ಆಶಯವನ್ನು ಅವರು ತಮ್ಮ ಸಂದೇಶದಲ್ಲಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ , ನಿರ್ದೇಶಕರಾದ ನವೀನ್ ಕುಡ್ಮೇರು, ಸಂಘಟನಾ ಕಾರ್ಯದರ್ಶಿ ಸರಿತಾ ಮೂರ್ಜೆ , ಸದಸ್ಯರಾದ ಪ್ರಶಾಂತ್ ಏರಮಲೆ, ಯಶೋಧರ ಕಡಂಬಳಿಕೆ ಯತೀಶ್ ಬೊಳ್ಳಾಯಿ , ನಾರಾಯಣ ಪಲ್ಲಿಕಂಡ ಲಿತೀಶ್ ವಾಮದಪದವು , ಸದಾನಂದ ವಾಮದ ಪದವು , ತ್ರಿವೇಣಿ ಮೂರ್ಜೆ , ಸೌಮ್ಯ ಪೂಂಜಾಲಕಟ್ಟೆ ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ. ಶಿವಾನಂದ ಎಂ , ನಾಗೇಶ್ ಪೊನ್ನೋಡಿ ಭಾಗವಹಿಸಿದ್ದರು. ಕಾರ್ಯಕ್ರಮದ ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ , ವಿಜೀತ್ ಕೋಟೆಕಣಿ ಸಂಗೀತ ಸೇವೆ ನೀಡಿದರು.

ಆತಿಥ್ಯ ವಹಿಸಿದ ರಾಮಾಂಜನೇಯ ಭಜನಾ ಮಂದಿರದ ಗೌರವಾಧ್ಯಕ್ಷರಾದ ಚೇತನ್ ಪೂಜಾರಿ ಕೃತಜ್ಞತೆ ಸಲ್ಲಿಸಿದರು. ಭಜನಾ ಮಂದಿರದ ಅಧ್ಯಕ್ಷರಾದ ಕಿರಣ್ ಕೋಟ್ಯಾನ್ ಉಪಸ್ಥಿತರಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು.ಘಟಕದ ಅಧ್ಯಕ್ಷರಾದ ಕಿರಣ್ ಪೂಂಜರಕೊಡಿ ಕಾರ್ಯಕ್ರಮ ನಿರೂಪಿಸಿದರು.