ರಾಷ್ಟ್ರೀಯ ಎಂಜಿನಿಯರ್‌ಗಳ ದಿನಾಚರಣೆ

0
6

ಮಂಗಳೂರು : ದೇಶದ ಸರ್ವತೋಮುಖ ಪ್ರಗತಿ ಹಾಗೂ ತಾಂತ್ರಿಕ ಬೆಳವಣಿಗೆಗೆ ಎಂಜಿನಿಯರ್‌ಗಳು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸುವ ದಿನವೇ ರಾಷ್ಟ್ರೀಯ ಎಂಜಿನಿಯರ್‌ಗಳ ದಿನಾಚರಣೆ ಎಂದು ಖ್ಯಾತ ಸಿವಿಲ್ ಎಂಜಿನಿಯರ್ ಹಾಗೂ ರೋಟರಿ ಜಿಲ್ಲೆ 3181ರ ದಂಡಾಧಿಕಾರಿ ಏಕನಾಥ್ ದಂಡಕೇರಿ ಹೇಳಿದರು.

ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಸೆ.24ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದ್ದು, ತಾಂತ್ರಿಕ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಅಗತ್ಯವಿದೆ ಎಂದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ವಲಯ 2ರ ಸಹಾಯಕ ಗವರ್ನರ್ ಹಾಗೂ ಎಂಜಿನಿಯರ್ ಸಂದೀಪ್ ರಾವ್ ಇಡ್ಯ ಅವರು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಗಳನ್ನು ಸ್ಮರಿಸಿದರು. ಅವರ ವೃತ್ತಿಕೌಶಲ್ಯ, ಅಸಾಧಾರಣ ಪ್ರತಿಭೆ, ಕರ್ತವ್ಯನಿಷ್ಠೆ, ಸಮಯಪ್ರಜ್ಞೆ, ಪ್ರಾಮಾಣಿಕತೆ ಹಾಗೂ ದೇಶಪ್ರೇಮ ಇಂದಿನ ಎಂಜಿನಿಯರ್‌ಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎನ್‌ಐಟಿಕೆ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕಟ್ಟಾ ವೆಂಕಟರಮಣ ಅವರಿಗೆ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ದೀರ್ಘಕಾಲದ ಅನುಪಮ ಸೇವೆ ಹಾಗೂ ಸಾಧನೆಗಾಗಿ ರೋಟರಿ ಮಂಗಳೂರು ಸಿಟಿ ವತಿಯಿಂದ ‘ಆದರ್ಶ ಎಂಜಿನಿಯರ್’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಟ್ಟಾ ವೆಂಕಟರಮಣ ಅವರು ಸಾಧಕರನ್ನು ಗುರುತಿಸಿ ಗೌರವಿಸುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಮಾಜಿ ಅಧ್ಯಕ್ಷ ಸುಮಿತ್ ರಾವ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಹಾಗೂ ಅವರ ಸಾಧನೆಗಳನ್ನು ವಿವರಿಸಿ ಅಭಿನಂದಿಸಿದರು.

ಸಂಸ್ಥೆಯ ಅಧ್ಯಕ್ಷೆ ಸಜ್ನಾ ಭಾಸ್ಕರ್ ಅವರು ಸ್ವಾಗತಿಸಿ ರಾಷ್ಟ್ರೀಯ ಎಂಜಿನಿಯರ್‌ಗಳ ದಿನಾಚರಣೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಬಳಿಕ ಎಂಜಿನಿಯರ್ ಸದಸ್ಯರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ನಿತಿನ್ ದೇವಾಡಿಗ ವರದಿ ಮಂಡಿಸಿ ವಂದಿಸಿದರು. ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ. ರಂಜನ್ ಹಾಗೂ ಮಾಜಿ ಅಧ್ಯಕ್ಷ ಬಸವ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.